ನ್ಯೂಸ್

ಸಾವಿನಲ್ಲೂ ಸಾರ್ಥಕತೆ ಮೆರೆದ ಹುಡುಗಿ! 10 ಜನರ ಬಾಳಿಗೆ ಬೆಳಕಾಗಿ ಭೂತಾಯಿ ಒಡಲು ಸೇರಿದ ದೀಪಿಕಾ

ನವದೆಹಲಿ: ಈ ಶತಕೋಟಿ ಜನರ ಜೀವನದಲ್ಲಿ ಮನುಷ್ಯನ ಹುಟ್ಟೇ ಒಂದು ಪವಾಡ. ಸಕಲ ಜೀವಿಗಳಲ್ಲೇ ಮಾನವ ಅತ್ಯಂತ ಬುದ್ಧಿವಂತ. ಹೀಗಾಗಿಯೇ ಮಾನವ ಜನ್ಮ ಶ್ರೇಷ್ಠ ಎನ್ನುತ್ತಾರೆ. ಈ ಜಗತ್ತಿನಲ್ಲಿ ಉಡುಗೊರೆಯಾಗಿ ಸಿಕ್ಕ ಈ ಜನ್ಮವನ್ನು ಸಾರ್ಥಕತೆಗೊಳಿಸಬೇಕು. ಆದರೆ, ಕೆಲವರು ಅಡ್ಡದಾರಿ ಹಿಡಿದು ದುರಂತ ಅಂತ್ಯ ಕಂಡರೆ, ಇನ್ನು ಕೆಲವರು ಅಪಘಾತದಲ್ಲಿ ದುರಾದೃಷ್ಟಕರ ರೀತಿಯಲ್ಲಿ ಬದುಕು ಕೊನೆಗೊಳಿಸುತ್ತಾರೆ. ಕೆಲವರಂತೂ ದುಡುಕಿನ ನಿರ್ಧಾರಗಳಿಂದ ಜಗತ್ತಿಗೆ ಗುಡ್​ಬೈ ಹೇಳುತ್ತಾರೆ. ಇನ್ನು ಸ್ವಲ್ಪ ಮಂದಿ ಕಾಯಿಲೆಗಳಿಂದ ಅಸುನೀಗುತ್ತಾರೆ.

ಹುಟ್ಟು ಉಚಿತ ಸಾವು ಖಚಿತ ಎಂಬುದು ನಿಜ. ಆದರೆ, ಹುಟ್ಟಿದ ಮೇಲೆ ನಮ್ಮ ಬದುಕು ಸಾರ್ಥವಾಗಬೇಕು. ಒಂದಷ್ಟು ಮಂದಿಗೆ ನೆರಗವಾಗಬೇಕು. ಕೆಲವರು ಸಾವಿನ ನಂತರವೂ ಸಾರ್ಥಕತೆಯನ್ನು ಮೆರೆಯುತ್ತಾರೆ. ತಮ್ಮ ಅಂಗಾಂಗಳನ್ನು ದಾನ ಮಾಡುವ ಮೂಲಕ ಇತರರ ಬಾಳಲ್ಲಿ ಬೆಳಕಾಗುತ್ತಾರೆ. ಅದೇ ರೀತಿ ಹುಡುಗಿಯೊಬ್ಬಳು ಇದೀಗ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ.

ಹೈದರಾಬಾದ್‌ನ ಮೇಡ್ಚಲ್‌ ಮೂಲದ ಶ್ರೀನಿವಾಸ್ ಮತ್ತು ಸರಿತಾ ದಂಪತಿಯ ಎರಡನೇ ಪುತ್ರಿ ದೀಪಿಕಾ (16) ಇದೇ ತಿಂಗಳ 22ರಂದು ಹಠಾತ್ ಫಿಟ್ಸ್‌ನಿಂದ ಮನೆಯಲ್ಲಿ ಕುಸಿದು ಬಿದ್ದಿದ್ದರು. ಆ ವೇಳೆ ಆಕೆಯ ತಲೆಗೆ ತೀವ್ರ ಪೆಟ್ಟಾಗಿತ್ತು. ತಕ್ಷಣ ದೀಪಿಕಾ ಅವರನ್ನು ಯಶೋದಾ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯಕೀಯ ಪರೀಕ್ಷೆಯ ನಂತರ ವೈದ್ಯರು ದೀಪಿಕಾ ಬ್ರೈನ್ ಡೆಡ್ ಆಗಿದೆ ಎಂಬ ತೀರ್ಮಾನಕ್ಕೆ ಬಂದರು. ಈ ವಿಷಯವನ್ನು ದೀಪಿಕಾ ಪಾಲಕರು ತಿಳಿಸಿದ್ದಾರೆ. ಬಂಗಾರದಂತಹ ಮಗಳು ದಿಢೀರ್​ ಸಾವಿಗೀಡಾದ್ದನ್ನು ಕಂಡು ಪಾಲಕರು ಕಂಗಾಲಾಗಿದ್ದಾರೆ.

ಒಂದೆಡೆ ಮಗಳ ಸಾವಿನ ನೋವಿದ್ದರೂ ಅಂಗಾಂಗ ದಾನದ ಮೂಲಕ ನಾಲ್ವರ ಬಾಳಿನಲ್ಲಿ ಬೆಳಕಾಗಬಹುದು ಅಂತಾ ವೈದ್ಯರ ಸಲಹೆ ಮೇರೆಗೆ ದೀಪಿಕಾ ಪಾಲಕರು ತಮ್ಮ ಮಗಳ ಅಂಗಾಂಗ ದಾನ ಮಾಡಿದ್ದಾರೆ. 25ರಂದು ದೀಪಿಕಾ ನಿಧನರಾದ ಬಳಿಕ ಅಂಗಾಂಗ ದಾನದಿಂದ 10 ಮಂದಿಗೆ ಜೀವದಾನ ಸಿಕ್ಕಿದೆ. ಈ ಬಗ್ಗೆ ಮಾತನಾಡಿರುವ ದೀಪಿಕಾ ಪಾಲಕರು, ತಮ್ಮ ಮಗಳು ಚೆನ್ನಾಗಿ ಓದುತ್ತಾಳೆ ಎಂದು ಭಾವಿಸಿದ್ದೆವು. ಆದರೆ, ವಿಧಿಯಾಟದಲ್ಲಿ ಮಗಳು ಪ್ರಾಣ ಕಳೆದುಕೊಂಡಿದ್ದಾಳೆ ಎನ್ನುತ್ತಾ ಕಣ್ಣೀರಿಟ್ಟರು. (ಏಜೆನ್ಸೀಸ್​)