ನ್ಯೂಸ್

ಸಂಪಾದಕೀಯ | ಸಂಘಟಿತ ಹೋರಾಟ ಅಗತ್ಯ

ಮೋಹನ್​ ಶೆಟ್ಟಿ

ಭಯೋತ್ಪಾದನೆ ಎಂಬ ಭೀಕರ ಪಿಡುಗು ಇಡೀ ಜಗತ್ತಿಗೆ ಕಂಟಕವಾಗಿದೆ. ಯಾವುದೇ ರಾಷ್ಟ್ರ ಅದನ್ನು ನಿರ್ಲಕ್ಷಿಸುವಂತಿಲ್ಲ. ಇಂಥ ಸಂದರ್ಭದಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಡಲು ತಡವಾಗಿಯಾದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಮ್ಮತ ಮೂಡುತ್ತಿರುವುದು ಸಮಾಧಾನಕರ ಬೆಳವಣಿಗೆ. ಉಗ್ರವಾದದ ವಿರುದ್ಧ ಇಡೀ ಜಗತ್ತು ಒಂದಾಗಿ ಹೋರಾಡಬೇಕು ಎಂದು ಭಾರತ ಹಲವು ವರ್ಷಗಳಿಂದ ಪ್ರತಿಪಾದಿಸುತ್ತಲೇ ಬಂದಿದೆ. ಜಮ್ಮು-ಕಾಶ್ಮೀರದ ಪೆಹಲ್ಗಾಮ್ ದಾಳಿ ಪ್ರಕರಣದ ನಂತರ ಇಂಥ ಸಂಘಟಿತ ಹೋರಾಟದ ಅಗತ್ಯ ಇನ್ನೂ ಹೆಚ್ಚಿದೆ. ಪ್ರವಾಸಿಗರನ್ನು ಗುರಿಯಾಗಿಸಿ ಏಪ್ರಿಲ್ 22ರಂದು ಭಯೋತ್ಪಾದಕರು ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡ ಘಟನೆ ಜಗತ್ತನ್ನು ಬೆಚ್ಚಿಬೀಳಿಸಿದೆ.

ಭಯೋತ್ಪಾದನೆ ವಿರುದ್ಧದ ಸಮರವನ್ನು ತೀವ್ರಗೊಳಿಸುವ ಭಾರತದ ಸಂಕಲ್ಪಕ್ಕೆ ಅಮೆರಿಕ ಹಾಗೂ ಇಸ್ರೇಲ್ ಬೆಂಬಲ ನೀಡಿದ ಬೆನ್ನಲ್ಲೇ ರಷ್ಯಾ ಕೂಡ ದನಿಗೂಡಿಸಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಪಹಲ್ಗಾಮ್ಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿರುವ ಪುತಿನ್, ದಾಳಿಕೋರರನ್ನು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿರುವುದು ಮಹತ್ವಪೂರ್ಣ ಬೆಳವಣಿಗೆ.

ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಬಾಂಧವ್ಯಗಳು ಉತ್ತಮವಾಗಿದ್ದು, ಈ ಸಹಕಾರವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಬೇಕಾಗಿದೆ. ಕೆಲವು ರಾಷ್ಟ್ರಗಳಷ್ಟೇ ಭಯೋತ್ಪಾದನೆಯ ವಿರುದ್ಧ ಸಮರ ಕೈಗೊಂಡಲ್ಲಿ ಅದು ಗುರಿ ಮುಟ್ಟಲು ಸಾಕಷ್ಟು ಶ್ರಮ ಹಾಗೂ ಸಮಯ ಅಗತ್ಯ. ಆದರೆ, ಅಂತಾರಾಷ್ಟ್ರೀಯ ವಲಯ ಒಂದಾಗಿ ನಿಂತರೆ ಉಗ್ರವಾದದ ಕರಾಳತೆಯನ್ನು ಕೊನೆಗಾಣಿಸುವುದು ಸುಲಭವಾಗುತ್ತದೆ ಮತ್ತು ಈ ನಿಟ್ಟಿನಲ್ಲಿನ ಸಮರ ಕೂಡ ಪರಿಣಾಮಕಾರಿಯಾಗುತ್ತದೆ. ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಬಲ ಇಚ್ಛಾಶಕ್ತಿ ಜಾಗತಿಕ ಮಟ್ಟದಲ್ಲಿ ಕಂಡುಬಂದಿರುವುದು ಆಶಾದಾಯಕ ಬೆಳವಣಿಗೆಯಾದರೂ, ಇದು ಅಂತಿಮ ಗುರಿಯನ್ನು ತಲುಪುವವರೆಗೆ ವಿಶ್ರಮಿಸುವಂತಿಲ್ಲ.

ಪಾಕಿಸ್ತಾನ ಭಯೋತ್ಪಾದನೆಯ ರಫ್ತು ರಾಷ್ಟ್ರ ಎಂಬ ವಾಸ್ತವ ಇಡೀ ಜಗತ್ತಿಗೆ ಗೊತ್ತಿರುವಾಗ, ಅದಕ್ಕೆ ನೀಡುತ್ತಿರುವ ಹಣಕಾಸು ಬೆಂಬಲವನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸೇರಿದಂತೆ ಇತರ ದೇಶಗಳು ತಕ್ಷಣವೇ ನಿಲ್ಲಿಸಬೇಕು. ಅಲ್ಲದೆ, ಭಯೋತ್ಪಾದನೆಗೆ ಕಳೆದ ಮೂರು ದಶಕಗಳಿಂದ ಬೆಂಬಲ ನೀಡುತ್ತಿರುವುದಾಗಿ ಪಾಕ್ ಬಹಿರಂಗವಾಗಿ ಒಪ್ಪಿಕೊಂಡಿದ್ದು, ವಿಶ್ವಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ‘ಭಯೋತ್ಪಾದಕ ರಾಷ್ಟ್ರ’ ಎಂದು ಘೋಷಿಸಲು ಕ್ರಮ ಕೈಗೊಳ್ಳಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಯ ಹಣಕಾಸು ಮೂಲಗಳನ್ನು ಸದೆಬಡಿಯಲು ಮತ್ತು ಉಗ್ರ ಸಂಘಟನೆಗಳನ್ನು ನಿರ್ನಾಮಗೊಳಿಸಲು ಇದು ಸಕಾಲ.