ನ್ಯೂಸ್

ಕೇಂದ್ರ ಬಜೆಟ್​ 2024; ಕುರ್ಚಿ ಉಳಿಸಿಕೊಳ್ಳಲು ಆಯವ್ಯಯ ಮಂಡಿಸಲಾಗಿದೆ ಎಂದ ವಿಪಕ್ಷದ ಸಂಸದರು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ಮೂರನೇ ಅವಧಿಯ ಚೊಚ್ಚಲ ಬಜೆಟ್​ನಲ್ಲಿ ಭರಪೂರ ಘೋಷಣೆಗಳನ್ನು ಮಾಡಲಾಗಿದ್ದು, ವಿತ್ತ ಸಚಿವರು ಕ್ಷೇತ್ರ ವಲಯಕ್ಕೆ ಅನುಗುಣವಾಗಿ ಬಜೆಟ್​​​ ಮಂಡನೆ ಮಾಡಿದ್ದು, ಶಿಕ್ಷಣ, ಉದ್ಯೋಗ, ಕೈಗಾರಿಕೆ, ಮಹಿಳೆ, ಕೃಷಿ, ಸೇರಿದಂತೆ ಅನೇಕ ಕ್ಷೇತ್ರಗಳಿಗೆ ನಿರ್ಣಾಯಲ ಘೋಷಣೆಗಳನ್ನು ಮಾಡಿದ್ದಾರೆ. ಆದರೆ, ಮೋದಿ ಸರ್ಕಾರದ ಬಜೆಟ್​ ಕುರಿತು ಮಾತನಾಡಿರುವ ವಿಪಕ್ಷ ನಾಯಕರು ಇದು ಕುರ್ಚಿ ಉಳಿಸಿಕೊಳ್ಳಲು ಮಾಡಲಾಗಿರುವ ಬಜೆಟ್​ ಎಂದು ಟೀಕಿಸಿದ್ದಾರೆ.

ಬಜೆಟ್​ ಕುರಿತು ಮಾತನಾಡಿದ ಎಸ್​ಪಿ ಸಂಸದ ಅಖಿಲೇಶ್​ ಯಾದವ್​, ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಹೆಚ್ಚಿದ್ದು, ಸರ್ಕಾರ ಆಂಧ್ರಪ್ರದೇಶ ಹಾಗೂ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಿರುವುದು ಸ್ವಾಗತಾರ್ಹ. ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಜೆಟ್​ನಲ್ಲಿ ಯೋಜನೆಗಳನ್ನು ರೂಪಿಸಲಾಗಿದ್ದು, ಪ್ರತಿಬಾರಿಯಂತೆ ಈ ಬಾರಿಯೂ ನೀರಸವಾಗಿದೆ ಎಂದು ಹೇಳಿದ್ದಾರೆ.

ಶಿರೋಮಣಿ ಅಕಾಲಿದಳದ ಸಂಸದೆ, ಮಾಜಿ ಕೇಂದ್ರ ಸಚಿವೆ ಹರ್​ಸಿಮ್ರತ್​ ಕೌರ್​ ಮಾತನಾಡಿ, ರೈತರ ಸಾಲಮನ್ನಾ ಹಾಗೂ ಎಂಎಸ್​ಪಿಗೆ ಕಾನೂನು ಮಾನ್ಯತೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆರ್ಥಿಕ ಸಮೀಕ್ಷೆಯ ಪ್ರಕಾತ ಶೇ. 50ರಷ್ಟು ಯುವಕರು ಯುವಕರು ನಿರುದ್ಯೋಗ, ಹಣದುಬ್ಬರ, ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿರೀಕ್ಷೆಯಲ್ಲಿದ್ದೆವು. ಆದರೆ, ಅದ್ಯಾವುದು ಆಗಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಟಿಎಂಸಿ ಸಂಸದ ಕಲ್ಯಾಣ್​ ಬ್ಯಾನರ್ಜಿ, ಸರ್ಕಾರವು ಈ ಕ್ಷಣದಲ್ಲಿ ತನಗೆ ಯಾರನ್ನು ಮುದ್ದು ಮಾಡಬೇಕು ಅನ್ನಿಸುತ್ತಿದೆಯೋ ಅಂತಹವರಿಗಾಗಿ ಈ ಬಜೆಟ್​ಅನ್ನು ಮಂಡಿಸಿದೆ. ಈ ಬಜೆಟ್​ ರಾಜಕೀಯ ಲಾಭಕ್ಕಾಗಿ ಮಾಡಲಾಗಿದ್ದು, ಪಶ್ಚಿಮ ಬಂಗಾಳಕ್ಕೆ ವಿಶೇಷ ಅನುದಾನವನ್ನು ನೀಡಲಾಗಿಲ್ಲ. ಕೇಂದ್ರ ಸರ್ಕಾರದ ಈ ಬಜೆಟ್​ಅನ್ನು ನೋಡಿದರೆ ಇವರು ಬಂಗಾಳಿಗರನ್ನು ಕಂಡರೆ ಆಗುವುದಿಲ್ಲ ಎಂದು ಸ್ಪಷ್ಟವಾಗಿ ಕಾಣುತ್ತದೆ. ಮುಂದಿನ ದಿನಗಳಲ್ಲಿ ಬಂಗಾಳದಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು.

ಈ ಕುರಿತು ಮಾತನಾಡಿರುವ ಸಂಸದ ಪಪ್ಪು ಯಾದವ್​, ಇಂದು ಮಂಡಿಸಿದ ಬಜೆಟ್​ನಲ್ಲಿ ನಾಲ್ಕು ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಹೇಳಿದ್ದಾರೆ. ಆದರೆ, ಕಳೆದ 10 ವರ್ಷಗಳಲ್ಲಿ ಇವರು ಎಷ್ಟು ಕೋಟಿ ಉದ್ಯೋಗ ನೀಡಿದ್ದಾರೆ ಎಂಬುದಾಗಿ ಮೊದಲು ತಿಳಿಸಬೇಕು. ಮೋದಿ ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ನಿತೀಶ್​ ಕುಮಾರ್​ ಅವರ ಮಾತಿಗೆ ಬೆಲೆ ಕೊಡಲಾಗಿಲ್ಲ. ಬಿಹಾರಕ್ಕೆ ಯಾವುದೇ ಅನುದಾನವನ್ನು ಘೋಷಿಸಲಾಗಿಲ್ಲ. ಯಾವುದೇ ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಘೋಷಿಸಲಾಗಿಲ್ಲ. ಹಿಂದಿನಂತೆ ಈ ಬಜೆಟ್​ ಕೂಡ ನೀರಸವಾಗಿತ್ತು ಎಂದು ಸಂಸದ ಪಪ್ಪು ಯಾದವ್​ ಕಿಡಿಕಾರಿದ್ದಾರೆ.