ನವದೆಹಲಿ: ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಬಹಿರಂಗಪಡಿಸಿದ ಮಾಹಿತಿಯು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿದೆ. ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಅವರು ಅದಾನಿಯ ಆಫ್‌ಶೋರ್ ಕಂಪನಿಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ ಮತ್ತು ಅದಕ್ಕಾಗಿಯೇ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅದು ಆರೋಪಿಸಿದ್ದು, ವಿರೋಧ ಪಕ್ಷಗಳು ಮಾಧಬಿ ರಾಜೀನಾಮೆಗೆ ಆಗ್ರಹಿಸಿವೆ.
ವರದಿಯಲ್ಲಿ ಮಾಡಿದ ಆರೋಪಗಳನ್ನು ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ನಿರಾಕರಿಸಿದ್ದಾರೆ. ಈ ಎಲ್ಲಾ ಆರೋಪಗಳು ಸುಳ್ಳು ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಮ್ಮ ಜೀವನ ಮತ್ತು ಹಣಕಾಸು ವ್ಯವಹಾರ ತೆರೆದ ಪುಸ್ತಕವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಹಿಂಡೆನ್‌ಬರ್ಗ್, ಮಾರುಕಟ್ಟೆ ನಿಯಂತ್ರಕ ಸೆಬಿಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳನ್ನು ಎತ್ತಿದೆ. ಅದಾನಿ ಸಮೂಹದ ಕಡಲಾಚೆಯ ಶಂಕಿತ ಷೇರುದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರಲು ಸೆಬಿಗೆ ನಿರ್ದಿಷ್ಟ ಕಾರಣವಿದೆ ಎಂದು ಆರೋಪಿಸಿದೆ. ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿಗೆ ನಿಧಿಯನ್ನು ಬಳಸಿಕೊಳ್ಳುವಲ್ಲಿ ಸೆಬಿ ಅಧ್ಯಕ್ಷೆ ಮಾಧಬಿ ಬುಚ್ ಸಹಕರಿಸಿದ್ದಾರೆ. ಈ ನಿಟ್ಟಿನಲ್ಲಿ ಅದಾನಿ ಗ್ರೂಪ್ ಮತ್ತು ಸೆಬಿ ಮುಖ್ಯಸ್ಥರ ನಡುವೆ ಸಂಬಂಧವಿದೆ. ನಮ್ಮ ದೃಷ್ಟಿಯಲ್ಲಿ ಸೆಬಿ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ವರದಿಯಲ್ಲಿ ಬಹಿರಂಗಪಡಿಸಿದೆ.
ಹೂಡಿಕೆದಾರರನ್ನು ವಂಚಕರಿಂದ ರಕ್ಷಿಸುವುದಕ್ಕಿಂತ ವಂಚಕರನ್ನು ರಕ್ಷಿಸಲು ಸೆಬಿ ಹೆಚ್ಚು ಪ್ರಯತ್ನಿಸುತ್ತಿದೆ. ಮಾಧಬಿ ಪುರಿ ಬುಚ್‌ರ ಸಂಬಳಕ್ಕಿಂತ ಕಂಪೆನಿ ಕೊಡುವ ಹಣ ಹಲವಾರು ಪಟ್ಟು ಹೆಚ್ಚಿದೆ. ಭಾರತೀಯ ಸಲಹಾ ವ್ಯವಹಾರ ಅಗೋರಾ ಅಡ್ವೈಸರಿ ಮಾಧಬಿ ಬುಚ್ ಒಡೆತನದಲ್ಲಿದೆ. ಅವರು ಕಂಪನಿಯಲ್ಲಿ 99 ಪ್ರತಿಶತ ಪಾಲನ್ನು ಹೊಂದಿದ್ದಾರೆ ಎಂದು ಹಿಂಡೆನ್‌ಬರ್ಗ್ ಸಂಶೋಧನಾ ವರದಿಯು ಬಹಿರಂಗಪಡಿಸಿದೆ.
2023ರ ಜನವರಿ 24 ರಂದು, ಹಿಂಡೆನ್‌ಬರ್ಗ್ ವರದಿಯನ್ನು ಪ್ರಕಟಿಸಿತು. ನಂತರ, ಅದಾನಿ ಸಮೂಹದ ಷೇರುಗಳು ತೀವ್ರವಾಗಿ ಕುಸಿದವು. ಆದರೆ ಕಂಪೆನಿ ಮತ್ತೆ ಚೇತರಿಸಿಕೊಂಡಿತು. ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ವರದಿಗೆ ಸಂಬಂಧಿಸಿದಂತೆ 46 ಪುಟಗಳ ಶೋಕಾಸ್ ನೋಟಿಸ್ ಅನ್ನು ಹಿಂಡೆನ್‌ಬರ್ಗ್‌ಗೆ ಕಳುಹಿಸಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಐಪಿ ಸಿಂಗ್ ಸೆಬಿ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಕೂಡ ಸೆಬಿ ಮುಖ್ಯಸ್ಥರ ರಾಜೀನಾಮೆಗೆ ಒತ್ತಾಯಿಸಿದೆ. ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಕೈಗಾರಿಕೋದ್ಯಮಿ ಗೌತಮ್ ಅದಾನಿಯನ್ನು ಗುರಿಯಾಗಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳು ಸಿಬಿಐ, ಜಾರಿ ನಿರ್ದೇಶನಾಲಯದ ನಿರ್ದೇಶಕರನ್ನು ಟ್ಯಾಗ್ ಮಾಡಿ ಪೋಕಾ ಕಾಯ್ದೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ ಕೇಳಿಬರುತ್ತಿದೆ.