ಚಿಕ್ಕಬಳ್ಳಾಪುರ: ಇಂದು ನಗರದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರದ ( Congress Govt) ವಿರುದ್ಧ ಗುಡುಗಿದ ವಿಪಕ್ಷ ನಾಯಕ ಆರ್. ಅಶೋಕ, ವಕ್ಫ್ ದೊಡ್ಡ ತಿಮಿಂಗಿಲ, ಎಲ್ಲವನ್ನೂ ಕಬಳಿಸುತ್ತಿದೆ. ಮುಂಬರುವ ಅಧಿವೇಶನದಲ್ಲಿ ಬಿಜೆಪಿ ಪ್ರಸ್ತಾಪಿಸಲಿರುವ ಪ್ರಮುಖ ಮೊದಲ ವಿಚಾರ ವಕ್ಫ್ ವಿವಾದ. ಇದರ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನ ಅಧಿವೇಶನದಲ್ಲಿ ವಕ್ಫ್ ಸೇರಿದಂತೆ ಕೆಲ ಧಾರ್ಮಿಕ ಮಂಡಳಿಗಳ ತಿದ್ದುಪಡಿ ಮಾಡಲಿದ್ದಾರೆ ಎಂದು ಹೇಳಿದರು.
"ವಕ್ಫ್ ಬೋರ್ಡ್ ಮಂಡಳಿ ಹೋಗುತ್ತದೆ. ಹಿಂದೆ ದೇಶದಲ್ಲಿ ಕೆಲವು ಮುಸ್ಲಿಮರು ಭಾರತವನ್ನು ಇಬ್ಭಾಗ ಮಾಡಿ ಪಾಕಿಸ್ತಾನ ಪಡೆದುಕೊಂಡರು. ಅದು ಸಹ ನಮ್ಮ ದೇಶವೇ ಆಗಿತ್ತು. ಈಗ ವಕ್ಫ್ ಬೋರ್ಡ್ ನಾಮಫಲಕ ಹಾಕಿ ಎಲ್ಲವೂ ನಮ್ಮದು ಎನ್ನುತ್ತಿದೆ. ದೇಶದ ಹಲವು ಭಾಗಗಳನ್ನು ವಶಪಡಿಸಿಕೊಂಡು ತನ್ನ ಆಸ್ತಿಯನ್ನಾಗಿಸಿಕೊಳ್ಳಲು ಮುಂದಾಗಿದೆ. ಇದು ಹಿಂದೆ ಪ್ರಧಾನಿಯಾಗಿದ್ದಾಗ ಮನಮೋಹನ್ ಸಿಂಗ್ ಮಾಡಿದ ಕೆಲಸ. ಅವರು ಅಧಿಕಾರದಿಂದ ಇಳಿದು ಹೋಗುವಾಗ ಈ ಕೆಲಸ ಮಾಡಿದ್ದಾರೆ" ಎಂದರು.
"ಈಗ ಇದನ್ನು ಮೋದಿ ಸರಿಪಡಿಸಲು ಮುಂದಾಗಿದ್ದಾರೆ. ಇದಕ್ಕೆ ದೇಶದಾದ್ಯಂತ ಜನ ಬೆಂಬಲ ವ್ಯಕ್ತವಾಗುತ್ತಿದೆ. ಆದರೆ, ಕಾಂಗ್ರೆಸ್ ಮಾತ್ರ ವಿರೋಧಿಸುತ್ತಿದೆ. ಮೊದಲಿನಿಂದಲೂ ಮುಸ್ಲಿಂ ಸಮುದಾಯವನ್ನು ಓಲೈಸುವುದೇ ದೊಡ್ಡ ಕೆಲಸವಾಗಿದೆ. ರಾಜ್ಯದಲ್ಲಿ ಸಚಿವ ಜಮೀರ್ ಅಹಮದ್ ಒತ್ತಡ ಹೇರಿ ವಕ್ಫ್ ಹೆಸರಿಗೆ ದಾಖಲೆ ಮಾಡಿಸಿಕೊಡುತ್ತಿದ್ದಾರೆ. ಗ್ಯಾರಂಟಿ ಭಾಗ್ಯಗಳ ಹೊರೆಯಿಂದ ಸರ್ಕಾರ ಕನ್ನ ಹಾಕುತ್ತಿದೆ. ಸಿಎಂ ಸಿದ್ದರಾಮಯ್ಯ ಕೇವಲ ಸುಳ್ಳು ರಾಮಯ್ಯ,
ಅನರ್ಹರ ಹೆಸರಿನಲ್ಲಿ ಬಡವರ ಕಾರ್ಡ್ ರದ್ದುಗೊಳಿಸಿದ್ದಾರೆ" ಎಂದು ಕಿಡಿಕಾರಿದರು.
ಇದನ್ನೂ ಓದಿ: ಜೇಮ್ಸ್ ಆಂಡರ್ಸನ್ ಮೇಲಿದೆ ಈ 3 ಫ್ರಾಂಚೈಸಿಗಳ ಕಣ್ಣು! ಯಾವ ತಂಡದ ಪಾಲಾಗ್ತಾರೆ ಇಂಗ್ಲೆಂಡ್ ವೇಗಿ? | IPL 2025 Auction
"ಈಗ ಕಾಕಾ ಪಾಟೀಲ್ಗೆ ಅಲ್ಲ ಬಡಜನರಿಗೂ ಅನ್ಯಾಯವಾಗುತ್ತಿದೆ. ಅನರ್ಹ ಕಾರ್ಡ್ ರದ್ದು ಕೇವಲ ಹೇಳಿಕೆ. ಹಾಗಾದರೆ ಅನರ್ಹರು ಕಾರ್ಡ್ ಪಡೆಯುವಾಗ ಸರ್ಕಾರ ಕಡಲೆಪುರಿ ತಿನ್ನುತ್ತಿತ್ತೇ? ಇಲ್ಲವೇ ಕತ್ತೆ ಕಾಯುತ್ತಿತ್ತೇ? ವಕ್ಫ್ ಲ್ಯಾಂಡ್ ಜಿಹಾದ್, ಪಡಿತರ ಕನ್ನ ಭಾಗ್ಯದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ" ಎಂದು ವಾಗ್ದಾಳಿ ನಡೆಸಿದರು.