ಕಳೆದೆರಡು ವರ್ಷಗಳಿಂದ ಕರೊನಾ ಹಾವಳಿ. ಜನಜೀವನಕ್ಕೆ ಸಂಕಟದ ಬಳುವಳಿ. ಹಾಗಂತ ಜೀವನ ಸಾಗಲೇಬೇಕು. ಮನೋಸ್ಥೈರ್ಯವನ್ನು ಹಿಗ್ಗಿಸಿಕೊಂಡು ಕತ್ತೆತ್ತಿ ನೋಡಿದರೆ ಹತ್ತೆಂಟು ದಾರಿಗಳು. ನಡೆ ಮುಂದೆ ನಡೆ ಮುಂದೆ.... ಎಂಬುದೇ ಮಂತ್ರ. ಆಗ ಜೀವನಕ್ಕಿದೆ ನಾನಾ ತಂತ್ರ. ಆವಿಷ್ಕಾರ, ನಾವೀನ್ಯತೆ, ಸಾಹಸಕ್ಕೆ ಜಗತ್ತಿನಲ್ಲುಂಟು ಮನ್ನಣೆ. 2021ರ ಕಹಿನೆನಪುಗಳನ್ನು ಹಿಂದಿಕ್ಕಿ, 2022ರಲ್ಲಿ ಹೊಸ ದಾರಿಯಲ್ಲಿ ಹೆಜ್ಜೆ ಮುಂದಿಡಲು ನಾನಾ ರಂಗಗಳ ಗಣ್ಯರು ಇಲ್ಲಿ ಕೆಲವು ಟಿಪ್ಸ್ ನೀಡಿದ್ದಾರೆ. ಸರ್ವರಿಗೂ ಹೊಸ ವರ್ಷ ಹರ್ಷದಾಯಕವಾಗಲಿ ಎಂಬುದು ವಿಜಯವಾಣಿ ಆಶಯ.
| ಚಿಕ್ಕಣ್ಣ ಚಿತ್ರನಟ
ಕೃಷಿ ಕುಟುಂಬದಿಂದ ಬೆಳೆದು ಬಂದ ನನಗೆ ಇಂದಿಗೂ ಕೃಷಿ ಇಷ್ಟದ ಕಾಯಕ. ನಾನು ಹೊಲದಲ್ಲಿ ನೆಟ್ಟಿರುವ ಗಿಡ, ಮರಗಳು ಬೆಳೆಯುತ್ತಿರುವುದನ್ನು ನೋಡುವುದೇ ಒಂದು ಸಂಭ್ರಮ. ಆ ಸಂಭ್ರಮವನ್ನು ಬಣ್ಣಿಸಲು ಸಾಧ್ಯವಿಲ್ಲ. ಕೃಷಿ ಅಂದ ತಕ್ಷಣ ನಷ್ಟ ಎಂಬುದೇ ಎಲ್ಲರ ಕಣ್ಣ ಮುಂದೆ ಬರುತ್ತದೆ. ಆದರೆ, ಯೋಜನಾಬದ್ಧವಾಗಿ ಹಾಗೂ ಸ್ವಂತ ಬುದ್ಧಿಯಲ್ಲಿ ಕೃಷಿ ಮಾಡಿದರೆ ಯಶಸ್ಸು ಖಚಿತ. ಯಾರೋ ನೀಡಿದ ಸಲಹೆ ಮೇರೆಗೆ ಕೃಷಿ ಮಾಡಿದರೆ ನಷ್ಟ ನಿಶ್ಚಿತ. ಅಂತೆಯೆ, ಒಬ್ಬ ರೈತ ಟೊಮ್ಯಾಟೊ ಬೆಳೆದು ಲಾಭ ಮಾಡಿದರೆ ಸುತ್ತಮುತ್ತಲಿನ ಹಳ್ಳಿಯ ರೈತರೆಲ್ಲ ಆ ವರ್ಷ ಟೊಮ್ಯಾಟೊ ಬೆಳೆದು ನಷ್ಟ ಅನುಭವಿಸುತ್ತಾರೆ. ಈ ರೀತಿ ಏಕಬೆಳೆ ಬೆಳೆಯದೆ ಒಂದು ಎಕರೆ ಜಮೀನು ಇದ್ದರೆ ಅದನ್ನು ನಾಲ್ಕು ಭಾಗ ಮಾಡಿ ನಾಲ್ಕು ರೀತಿಯ ಬೆಳೆ ಬೆಳೆದರೆ ನಷ್ಟ ಎಂಬುದು ಇರುವುದಿಲ್ಲ. ಈ ರೀತಿಯ ಕೃಷಿ ಪದ್ಧತಿಯಿಂದ ಒಂದು ಕುಟುಂಬವನ್ನು ಉತ್ತಮವಾಗಿ ಮುನ್ನಡೆಸುವಷ್ಟು ಲಾಭ ದೊರೆಯುವುದು ನಿಶ್ಚಿತ. ಭೂಮಿಯಿಂದ ದೊರೆಯುವ ಅಲ್ಪ ಲಾಭವನ್ನು ಸಂಭ್ರಮದಿಂದ ಸ್ವೀಕರಿಸುವ ಮನಸ್ಸು ಇರಬೇಕು. ಅತಿಯಾಗಿ ಸಂಪಾದಿಸುವ ಆಸೆಯಿಂದ ಏಕಬೆಳೆ ಬೆಳೆಯಲು ಹೋಗಬೇಡಿ.