ನಂಜನಗೂಡಿನ ಜಮೀನಿನಲ್ಲಿ ಪ್ರತ್ಯಕ್ಷವಾದ 4 ಹುಲಿಗಳು 
ನ್ಯೂಸ್

ನಂಜನಗೂಡಿನಲ್ಲಿ 'ಆಪರೇಷನ್ ಟೈಗರ್': ಡ್ರೋನ್ ಕ್ಯಾಮೆರಾದಲ್ಲಿ ಬರೋಬ್ಬರಿ 4 ಹುಲಿಗಳು ಪತ್ತೆ ! | Nanjangud Tiger Attack

Mysore Tiger Drone Video: ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತಮುತ್ತ ಹುಲಿ ಭೀತಿ ತೀವ್ರಗೊಂಡಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ. ಇತ್ತೀಚೆಗಷ್ಟೇ ಜಮೀನಿನಲ್ಲಿ ಕೆಲಸ ಮಾಡ್ತಿದ್ದ ರೈತನ ಮೇಲೆ ಹುಲಿ ದಾಳಿ ನಡೆಸಿತ್ತು. ಈ ಬೆನ್ನಲ್ಲೇ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದಾಗ, ಒಂದೇ ಜಾಗದಲ್ಲಿ ಬರೋಬ್ಬರಿ ನಾಲ್ಕು ಹುಲಿಗಳು ಪ್ರತ್ಯಕ್ಷವಾಗಿವೆ.

ನವೆಂಬರ್ 3ರಂದು ಆಕಳ ಗ್ರಾಮದ ರೈತ ಪರಮೇಶ್ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ, ಹುಲಿಯೊಂದು ದಿಢೀರ್ ದಾಳಿ ನಡೆಸಿತ್ತು. ತೀವ್ರ ಗಾಯಗೊಂಡಿದ್ದ ಪರಮೇಶ್ ಅವರನ್ನು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಭೀಕರ ಘಟನೆಯಿಂದ ಬೆಚ್ಚಿಬಿದ್ದ ಗ್ರಾಮಸ್ಥರು, ಹುಲಿಯನ್ನು ಕೂಡಲೇ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು.

ಡ್ರೋನ್ ಕ್ಯಾಮೆರಾದಲ್ಲಿ 4 ಹುಲಿಗಳು ಪತ್ತೆ

ಗ್ರಾಮಸ್ಥರ ಆಕ್ರೋಶ ಹಾಗೂ ಆತಂಕ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ, ಆಧುನಿಕ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಭರ್ಜರಿ ಶೋಧ ಕಾರ್ಯಾಚರಣೆಗಿಳಿದರು. ನವೆಂಬರ್ 4ರ ಬುಧವಾರ ರಾತ್ರಿ ಡ್ರೋನ್ ದೃಶ್ಯಗಳನ್ನು ಪರಿಶೀಲಿಸಿದಾಗ, ಆಕಳ ಗ್ರಾಮದ ಜಮೀನೊಂದರಲ್ಲಿ ಒಂದು ತಾಯಿ ಹುಲಿ ಮತ್ತು ಮೂರು ಮರಿಗಳು ಒಟ್ಟಿಗೆ ಓಡಾಡುತ್ತಿರೋ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದೆ.

ಒಂದೇ ಜಾಗದಲ್ಲಿ ನಾಲ್ಕು ಹುಲಿಗಳು ಇರೋದು ಗೊತ್ತಾಗುತ್ತಿದ್ದಂತೆ ಅಲರ್ಟ್ ಆದ ಸ್ಥಳೀಯ ಶಾಸಕ ದರ್ಶನ್ ಧ್ರುವನಾರಾಯಣ್, ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳ ಜೊತೆ ಮಾತನಾಡಿ ತಕ್ಷಣವೇ ಬೋನು ಹಾಕಿ ಸೆರೆಹಿಡಿಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Bittu Tabahi: ನದಿ ಸ್ವಚ್ಛಗೊಳಿಸಲು ಹೋದವನಿಗೆ ಬಂತು ಚರ್ಮ ರೋಗ: 'ಬಿಟ್ಟು ತಬಾಹಿ'ಯ ಕೈ-ಕಾಲುಗಳ ಸ್ಥಿತಿ ನೋಡಿ!

ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಹುಲಿಗಳನ್ನು ಸೆರೆಹಿಡಿಯಲು ಕದನ ವಿರಾಮವಿಲ್ಲದೆ ಕೆಲಸ ಮುಂದುವರಿಸಿದ್ದಾರೆ.