ಮುಂಬೈ: ಮಹಿಳಾ ಫ್ಯಾಷನ್ ಡಿಸೈನರ್ನ ಮಾರ್ಫ್ ಮಾಡಿದ ಫೋಟೋವೊಂದನ್ನು ವೈರಲ್ ಮಾಡುವ ಬೆದರಿಕೆಯೊಡ್ಡಿದ ಸೈಬರ್ ವಂಚಕ, ಆಕೆಯಿಂದ ಭಾರೀ ಮೊತ್ತದ ಹಣವನ್ನು ಲಪಟಾಯಿಸಿದ ಪ್ರಕರಣ ದಕ್ಷಿಣ ಮುಂಬೈನಲ್ಲಿ ವರದಿಯಾಗಿದೆ.
ವೃತ್ತಿಯಲ್ಲಿ ಫ್ಯಾಶನ್ ಡಿಸೈನರ್ ಆಗಿದ್ದ ಮಹಿಳೆಗೆ ವ್ಯಾಟ್ಸ್ಆ್ಯಪ್ನಲ್ಲಿ ವಂಚಕನೊಬ್ಬ ತನ್ನ ಫೋಟೋವನ್ನು ಮಾರ್ಫ್ ಮಾಡಿ ರವಾನಿಸಿದ್ದು, ಕೇಳಿದ್ದಷ್ಟು ಹಣ ಕೊಡದಿದ್ದರೇ ಅದನ್ನು ವೈರಲ್ ಮಾಡುವ ಬೆದರಿಕೆ ಹಾಕಿದ್ದಾನೆ. ಈ ಆಮಿಷಕ್ಕೆ ತುತ್ತಾದ ಮಹಿಳೆ, ಕೇವಲ 14 ದಿನಗಳಲ್ಲಿ ಬರೋಬ್ಬರಿ 4.12 ಲಕ್ಷ ರೂ. ಹಣವನ್ನು ಆರೋಪಿಯ ಖಾತೆಗೆ ವರ್ಗಾಯಿಸಿದ್ದಾರೆ.
ಘಟನೆಯ ವಿವರ: ಅಪರಿಚಿತ ಸೈಬರ್ ವಂಚಕನೊಬ್ಬ 43 ವರ್ಷದ ದಕ್ಷಿಣ ಮುಂಬೈ ಮೂಲದ ಮಹಿಳಾ ಫ್ಯಾಷನ್ ಡಿಸೈನರ್‌ಗೆ ಆಕೆಯ ಮಾರ್ಫ್ ಮಾಡಿದ ಅಶ್ಲೀಲ ಫೋಟೋವನ್ನು ವೈರಲ್ ಮಾಡುವುದಾಗಿ ವ್ಯಾಟ್ಸ್ಆಪ್ ಮೂಲಕ ಬೆದರಿಕೆ ಹಾಕಿದ್ದಾನೆ. ಇದಕ್ಕೆ ಹೆದರಿದ ಮಹಿಳೆ ಮೊದಲಿಗೆ ನಾಲ್ಕು ಸಾವಿರ ರೂ.ಗಳನ್ನು ವರ್ಗಾಯಿಸಿದ್ದಾರೆ. ತದನಂತರದಲ್ಲಿ ಆತ ಪದೇ ಪದೇ ಕೇಳಿದಾಗಲೆಲ್ಲಾ ಹೆಚ್ಚೆಚ್ಚು ಮೊತ್ತದ ಹಣವನ್ನು ಕಳುಹಿಸಿದ್ದಾರೆ.
ಕೊಲಾಬಾ ಪೊಲೀಸರ ಮಾಹಿತಿಯ ಪ್ರಕಾರ, "ಅಪರಿಚಿತ ವ್ಯಕ್ತಿಯೊಬ್ಬರು ತನ್ನ ಮಾರ್ಫ್ ಮಾಡಿದ ಫೋಟೋವನ್ನು ವಾಟ್ಸಾಪ್‌ನಲ್ಲಿ ಕಳುಹಿಸಿದರು. ಕೇಳಿದಷ್ಟು ಹಣವನ್ನು ಕೊಡದಿದ್ದರೆ ತನ್ನ ಫೋಟೋವನ್ನು ವೈರಲ್ ಮಾಡುವೆ ಎಂಬ ಬೆದರಿಕೆ ಇಟ್ಟಿದ್ದ" ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
"ಮೊದಲು ಆತನಿಗೆ ಹೆದರಿ ನಾಲ್ಕು ಸಾವಿರ ರೂ.ಗಳನ್ನು ವರ್ಗಾಯಿಸಿದೆ. ತದನಂತವೂ ಹಲವು ಬಾರಿ ಕರೆ ಮಾಡಿ, ಹೆಚ್ಚಿನ ಮೊತ್ತದ ಬೇಡಿಕೆಯನ್ನು ಮುಂದಿಟ್ಟಿದ್ದ" ಎಂದು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಯ ಪ್ರಕಾರ, ಮಹಿಳೆ ಕೇವಲ 10-15 ದಿನಗಳಲ್ಲಿ, ಒಟ್ಟು 4.12 ಲಕ್ಷವನ್ನು ಕಳೆದುಕೊಂಡಿದ್ದಾರೆ. ಅಪರಿಚಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಐಟಿ ಕಾಯ್ದೆಯ ಸೆಕ್ಷನ್ 34, 419 ಮತ್ತು 420 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).