ನ್ಯೂಸ್

ಆನ್​ಲೈನ್ ಶಿಕ್ಷಣ ಕುರಿತು ದೂರು ಇದೆಯಾ? ಹಾಗಾದರೆ ಇಲ್ಲಿಗೆ ಸಂಪರ್ಕಿಸಿ...

ಬೆಂಗಳೂರು: ಆನ್​ಲೈನ್ ಶಿಕ್ಷಣ ನಿರ್ವಹಣೆಗೆ ಸಂಬಂಧಿಸಿದಂತೆ ಪೋಷಕರ ಮತ್ತು ಸಾರ್ವಜನಿಕರ ಯಾವುದೇ ದೂರುಗಳಿದ್ದರೂ ಶಿಕ್ಷಣ ಇಲಾಖೆಯ ಶಿಕ್ಷಣವಾಣಿ-ಸಾರ್ವಜನಿಕ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶಿಕ್ಷಣವಾಣಿ-ಸಹಾಯವಾಣಿಗೆ (18004257302) ಇಲ್ಲವೇ ಸಹಾಯವಾಣಿ ವಾಟ್ಸ್ಆ್ಯಪ್ ನಂಬರ್​ 9483045130 ಗೆ ಪೋಷಕರು ಕರೆ ಮಾಡಿ ಆನ್​ಲೈನ್​ ಶಿಕ್ಷಣ ನಿರ್ವಹಣೆ ಕುರಿತ ದೂರುಗಳನ್ನು ತಿಳಿಸಬಹುದು. ಇಂತಹ ದೂರುಗಳನ್ನು ನಿರ್ವಹಿಸಲು ಕೂಡಲೇ ಆಯುಕ್ತರ ಕಚೇರಿ ಮತ್ತು ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರ ಹಂತದಲ್ಲಿ ಒಬ್ಬೊಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಬೆಂಗಳೂರು, ಕಲಬುರಗಿ, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವು ನಗರ ಕೇಂದ್ರಿತ ಪ್ರದೇಶಗಳಲ್ಲಿ ಇಂತಹ ದೂರು ಹೆಚ್ಚಾಗಿರುವುದರಿಂದ ಅಧಿಕಾರಿಗಳು ಆನ್​ಲೈನ್ ಶಿಕ್ಷಣದಲ್ಲಿನ ಸಮಸ್ಯೆ ಮತ್ತು ದೂರುಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಪರಿಹಾರ ಸೂಚಿಸಬೇಕು ಎಂದು ಇಲಾಖೆ ಆಯುಕ್ತರಿಗೆ ಸಚಿವರು ಸಲಹೆ ನೀಡಿದರು.

ತಜ್ಞರ ಸಮಿತಿ ನಿಗದಿಪಡಿಸಿರುವ ಸಮಯದಷ್ಟೇ ಆನ್​ಲೈನ್​ ತರಗತಿ ನಿರ್ವಹಿಸಬೇಕು. ಇದು ಎಲ್ಲ ಶಾಲೆಗಳಿಗೂ ಅನ್ವಯ. ಬಿಇಒಗಳು ಆನ್​ಲೈನ್ ತರಗತಿಗಳ ಬಗ್ಗೆ ಪರಾಮರ್ಶೆ ಮಾಡಬೇಕು. ಆನ್‍ಲೈನ್ ತರಗತಿಯಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರಿಗೆ ಸುರೇಶ್​ ಕುಮಾರ್​ ಸೂಚಿಸಿದರು.

ಕೇಂದ್ರದ ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಇಡೀ ರಾಷ್ಟ್ರದಲ್ಲಿ ಮೊದಲ ರಾಜ್ಯವಾಗಲಿದೆ. ರಾಜ್ಯದಲ್ಲಿ ನೂತನ ಶಿಕ್ಷಣ ನೀತಿ ಅಳವಡಿಕೆಗೆ ಸಂಬಂಧಿಸಿದಂತೆ ನೇಮಿಸಲಾದ ತಜ್ಞರ ಸಮಿತಿ ನ.7ರಂದು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.