ನ್ಯೂಸ್

ಆನ್​ಲೈನ್​ನಲ್ಲಿ ಮಕ್ಕಳ ಶೋಷಣೆ: ಮಧ್ಯಪ್ರದೇಶದಲ್ಲಿ 4000 ಆರೋಪಿಗಳ ಬಂಧನಕ್ಕೆ ತಯಾರಿ

ಮಕ್ಕಳ ಅಶ್ಲೀಲ ವೀಡಿಯೊ, ಫೋಟೋ ಹಾಗೂ ಲೈಂಗಿಕ ಪ್ರಲೋಭನೆ ಒಳಗೊಂಡಂತೆ ಮಕ್ಕಳ ಲೈಂಗಿಕ ದೌರ್ಜನ್ಯ ವಿಷಯ (ಚೈಲ್ಡ್ ಸೆಕ್ಸುವಲ್ ಅಬ್ಯುಸ್ ಮಟಿರಿಯಲ್- ಸಿಎಸ್​ಎಎಂ) ಪ್ರಸಾರ ಮಾಡಿದರೆನ್ನಲಾದ 30 ಸಾವಿರಕ್ಕೂ ಹೆಚ್ಚು ಮಂದಿಯನ್ನು ಮಧ್ಯಪ್ರದೇಶ ರಾಜ್ಯದಲ್ಲಿ ಪತ್ತೆ ಮಾಡಲಾಗಿದೆ. ಅಮೆರಿಕ ಮೂಲದ ‘ಕಾಣೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರ’ (ಎನ್​ಸಿಎಂಇಸಿ) ಈ ಪತ್ತೆ ಕಾರ್ಯ ನಡೆಸಿದೆ. ಕೇಂದ್ರೀಯ ಗುಪ್ತಚರ ದಳಗಳಿಂದ ಪಡೆದ ಎನ್​ಸಿಎಂಇಸಿ ಸೈಬರ್​ಟಿಪ್​ಲೈನ್ ದತ್ತಾಂಶ ಮಾಹಿತಿಯನ್ನಾಧರಿಸಿ 4,000 ಕ್ಕೂ ಹೆಚ್ಚು ಪ್ರಕರಣಗಳನ್ನು ಗುರುತಿಸಿರುವ ಮಧ್ಯಪ್ರದೇಶ ಪೋಲಿಸರು ಬೃಹತ್ ದಾಳಿ ನಡೆಸಲು ಯೋಜಿಸಿದ್ದಾರೆ. ಇನ್ನುಳಿದ 26 ಸಾವಿರ ಪ್ರಕರಣಗಳು ಪರಿಶೀಲನೆಯಲ್ಲಿವೆ. ಸಂಭಾವ್ಯ ಬಂಧನ ಪಟ್ಟಿಗಳನ್ನು ರಾಜ್ಯ ಸೈಬರ್ ಸೆಲ್ ಪ್ರಧಾನ ಕಚೇರಿಯಿಂದ 10 ಜಿಲ್ಲೆಗಳಿಗೆ ರವಾನಿಸಲಾಗುತ್ತಿದೆ ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿವೆ.

ಭಾರತದ ಅತಿದೊಡ್ಡ ನೇಮಕಾತಿ ಹಗರಣವಾದ ವ್ಯಾಪಮ್ ಮಧ್ಯಪ್ರದೇಶದಲ್ಲಿ 2013ರಲ್ಲಿ ನಡೆದಿತ್ತು. ಇದರಲ್ಲಿ ಬಂಧಿತರ ಸಂಖ್ಯೆ ಅಂದಾಜು 3,500. ಈಗ ಸಿಎಸ್​ಎಎಂ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಇದನ್ನು ಮೀರುವ ಸಾಧ್ಯತೆ ಇದೆ. ಎನ್​ಸಿಎಂಇಸಿ ದತ್ತಾಂಶ ಮಾಹಿತಿ ಪ್ರಕಾರ, 2,000ಕ್ಕೂ ಹೆಚ್ಚು ಪ್ರಕರಣಗಳೊಂದಿಗೆ ಇಂದೋರ್ ಗರಿಷ್ಠ ಸಿಎಸ್​ಎಎಂ ಅಪ್​ಲೋಡ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ರಾಜಧಾನಿ ಭೋಪಾಲ್ 1,000ಕ್ಕೂ ಹೆಚ್ಚು ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಗ್ವಾಲಿಯರ್, ಜಬಲ್ಪುರ್, ಧಾರ್ ಮತ್ತು ಖಾಗೋನ್ ಸೇರಿ ಮಧ್ಯಪ್ರದೇಶದ ಇತರ ಪ್ರಮುಖ ನಗರಗಳಲ್ಲಿ 500 ರಿಂದ 600 ಪ್ರಕರಣಗಳು ವರದಿಯಾಗಿವೆ. ರಾಜ್ಯದ ಸೈಬರ್ ಪ್ರಧಾನ ಕಚೇರಿಯಿಂದ ಮುಂದಿನ ಕ್ರಮಕ್ಕಾಗಿ ಈ ದತ್ತಾಂಶ ಮಾಹಿತಿಗಳನ್ನು, ಕಂಪ್ಯೂಟರ್ ಐಪಿ ವಿಳಾಸಗಳು, ಸ್ಥಳಗಳು ಮತ್ತು ಬಳಸಿದ ಸಾಧನಗಳ ವಿವರಗಳನ್ನು ವಿವಿಧ ಜಿಲ್ಲೆಗಳಲ್ಲಿನ ಎಸ್​ಪಿ ಕಚೇರಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ‘4000 ಜನರನ್ನು ಬಂಧಿಸುವುದು ಕಠಿಣ ಕಾರ್ಯವಾಗಿದೆ. ಆದರೆ, ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಇದುವರೆಗಿನ ತನಿಖೆಗಳ ಪ್ರಕಾರ, ಈ ಯಾವುದೇ ಅಕ್ರಮದಲ್ಲಿ ಮಧ್ಯಪ್ರದೇಶದ ಯಾವೊಬ್ಬ ಹೆಣ್ಣುಮಕ್ಕಳು ಇಲ್ಲ ಎಂದು ತಿಳಿದುಬಂದಿದೆ.

ಈ ವೀಡಿಯೊಗಳಲ್ಲಿ ಇರುವ ಹುಡುಗಿಯರು ಇತರ ದೇಶಗಳಿಗೆ ಸೇರಿದವರಾಗಿದ್ದಾರೆ. ಇವುಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಡೌನ್​ಲೋಡ್, ಅಪ್​ಲೋಡ್ ಮಾಡಲಾಗಿದೆ ಅಥವಾ ಹಂಚಿಕೆ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ. ಕೆಲವು ಪ್ರಕರಣಗಳಲ್ಲಿ ಸೂಚಿಸಲಾಗಿರುವ ವಿಷಯವನ್ನು ಸಿಎಸ್​ಎಎಂ ಎಂದು ಗುರುತಿಸಲಾಗದು ಎಂದು ಅಧಿಕಾರಿಗಳು ಹೇಳಿದ್ದಾರೆ. ಉದಾಹರಣೆಗೆ, ಒಂದು ಹಳ್ಳಿಯಿಂದ ಬಂದಿರುವಂತೆ ಕಾಣುವ ವಯಸ್ಸಾದ ಮಹಿಳೆ ಬಟ್ಟೆಯಿಲ್ಲದ ಶಿಶುವಿಗೆ ಆಹಾರ ನೀಡುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಇದನ್ನು ಸಿಎಸ್​ಎಎಂ ಪ್ರಕರಣ ಎಂದು ಪರಿಗಣಿಸಲಾಗದು. ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ವ್ಯವಸ್ಥೆ ಮೂಲಕ ಈ ದತ್ತಾಂಶ ಮಾಹಿತಿಗಳನ್ನು ಕಲೆ ಹಾಕಿರಬಹುದಾಗಿರುವುದರಿಂದ ಇಂತಹವುಗಳನ್ನು ಸಿಎಸ್​ಎಎಂ ಪ್ರಕರಣ ಎಂದು ತಪ್ಪಾಗಿ ಗುರುತಿಸಿರಬಹುದು. ಇಂಥ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಮಾಹಿತಿ ವಿನಿಮಯ ಒಪ್ಪಂದ: 2019ರ ಫೆಬ್ರವರಿ 29ರಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್​ಸಿಆರ್​ಬಿ) ಜತೆ ಮಾಡಿಕೊಂಡ ಒಪ್ಪಂದದ ಅನುಸಾರ ಅಮೆರಿಕ ಮೂಲದ ಎನ್​ಸಿಎಂಇಸಿ ಸಂಸ್ಥೆಯು ಸಿಎಸ್​ಎಎಂ ಪ್ರಕರಣಗಳಿಗೆ ಸಂಬಂಧಿಸಿದಂತೆ ಪತ್ತೆ ಮಾಡಿದ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿದೆ. ಈ ‘ಸೈಬರ್​ಟಿಪ್​ಲೈನ್’ ವರದಿಗಳನ್ನು ಭಾರತದೊಂದಿಗೆ ಹಂಚಿಕೊಳ್ಳುತ್ತಿದೆ.

ಪತ್ತೆ ಹೇಗೆ?: ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮಕ್ಕಳ ಅಶ್ಲೀಲ ಫೋಟೋ ಹಾಗೂ ವೀಡಿಯೊಗಳ ದತ್ತಾಂಶ ಪತ್ತೆಗಾಗಿ ಟ್ರಾ್ಯಕರ್​ಗಳನ್ನು ಬಳಸಲಾಗುತ್ತದೆ. ಈ ಟ್ರಾ್ಯಕರ್ ಸಾಫ್ಟ್ ವೇರ್​ಗಳು ನಗ್ನತೆ ಮತ್ತು ಮಕ್ಕಳ ಮುಖದ ಮೇಲೆ ಒತ್ತಡದ ಅಭಿವ್ಯಕ್ತಿಗಾಗಿ ಶೋಧ ಮಾಡುವ ಅಲ್ಗಾರಿದಮ್ ಹೊಂದಿರುತ್ತವೆ. ಇಂತಹ ವಿಡಿಯೋಗಳು ಪತ್ತೆಯಾದ ತಕ್ಷಣ ಎಚ್ಚರಿಕೆ ಸಂದೇಶ ಹಾಗೂ ವಿಡಿಯೋದ ವಿಷಯವು ಸಂಬಂಧಪಟ್ಟ ಕಾನೂನು ಜಾರಿ ಸಂಸ್ಥೆಗಳಿಗೆ ರವಾನೆಯಾಗುತ್ತದೆ. ಫೋಟೋಗಳು ಅಥವಾ ವೀಡಿಯೊಗಳು ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿಲ್ಲ ಎಂದು ಕಂಡುಬಂದಾಗ ಪ್ರಕರಣಗಳನ್ನು ಕೈಬಿಡಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ಮಕ್ಕಳ ಅತ್ಯಾಚಾರಿಗಳಿಗೆ ಮರಣದಂಡನೆ: ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದಲ್ಲಿ ಪೊಲೀಸರು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳಿಗೆ ಶೂನ್ಯ-ಸಹಿಷ್ಣುತೆ ಹೊಂದಿದ್ದಾರೆ. ಮಕ್ಕಳ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಕಾನೂನು ಇಲ್ಲಿದೆ. 2017ರಲ್ಲಿ ಮಧ್ಯಪ್ರದೇಶ ಸರ್ಕಾರವು 12 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಅತ್ಯಾಚಾರಕ್ಕೆ ಮರಣದಂಡನೆ ವಿಧಿಸುವ ಮಸೂದೆ ಅಂಗೀಕರಿಸಿತ್ತು. ಅಂದಿನಿಂದ ಮಧ್ಯಪ್ರದೇಶದಲ್ಲಿ ನ್ಯಾಯಾಲಯಗಳು 72 ಅಪರಾಧಿಗಳಿಗೆ ಮರಣದಂಡನೆ ವಿಧಿಸಿವೆ.

ಸೈಬರ್​ಟಿಪ್​ಲೈನ್ ಎಂದರೇನು?: ಮಕ್ಕಳಿರುವ ಲೈಂಗಿಕ ವೀಡಿಯೊ, ಫೋಟೋ ಸೇರಿದಂತೆ ಅಶ್ಲೀಲ ಸಾಮಗ್ರಿ ತಯಾರಿಕೆ ಹಾಗೂ ವಿತರಣೆ, ಮಕ್ಕಳ ವೇಶ್ಯಾವಾಟಿಕೆ, ಮಕ್ಕಳ ಲೈಂಗಿಕ ಪ್ರವಾಸೋದ್ಯಮ, ಮಕ್ಕಳಿಗೆ ಲೈಂಗಿಕ ಕಿರುಕುಳ, ಮಕ್ಕಳಿಗೆ ಅನಪೇಕ್ಷಿತ ಅಶ್ಲೀಲ ಸಾಮಗ್ರಿ ಕಳುಹಿಸುವುದು ಮುಂತಾದವು ಸೇರಿದಂತೆ ಅಂತರ್ಜಾಲದಲ್ಲಿ ಸಂಭವಿಸುವ ಮಕ್ಕಳ ಲೈಂಗಿಕ ಶೋಷಣೆಯ ಶಂಕಿತ ಘಟನೆಗಳನ್ನು ತ್ವರಿತವಾಗಿ ವರದಿ ಮಾಡುವ ಉದ್ದೇಶಕ್ಕಾಗಿ ಸೈಬರ್​ಟಿಪ್​ಲೈನ್ ರೂಪಿಸಲಾಗಿದೆ. ಇದಕ್ಕಾಗಿ ಮೀಸಲಾದ ವೆಬ್​ಸೈಟ್ ಅಥವಾ ದೂರವಾಣಿ ಸಂಖ್ಯೆ ಮೂಲಕ ಮಾಹಿತಿಯನ್ನು ಪೋಷಕರು ಅಥವಾ ಮಕ್ಕಳು ನೀಡಬಹುದಾಗಿದೆ. ನಂತರ ಇವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ರವಾನಿಸಲಾಗುತ್ತದೆ.