ಆರೋಪಿ ಸಲ್ಮಾನ್. ಪಕ್ಕದಲ್ಲಿ ಎರಡನೇ ಪತ್ನಿ, ಹಿನ್ನೆಲೆಯಲ್ಲಿ ಮೊದಲನೇ ಪತ್ನಿ 
ನ್ಯೂಸ್

ವಂಚಕ ಪತಿಯ ಅರಸಿ ಬೆಂಗಳೂರಿಗೆ ಬಂದ್ಲು ಎರಡನೇ ಪತ್ನಿ; ಇವ ಶ್ರೀಮಂತರನ್ನೇ ನೋಡಿ ಮದ್ವೆ ಆಗಿ ಮೋಸ ಮಾಡ್ತಿದ್ದ...

ಬೆಂಗಳೂರು: ಈತನ ಹೆಸರು ಮೊಹಮ್ಮದ್ ಸಲ್ಮಾನ್ ಷರೀಫ್​. ಒಂದಲ್ಲ ಎರಡು ಮದುವೆ ಆಗಿದ್ದಾನೆ. ಜೊತೆಗೆ ಎರಡನೇ ಪತ್ನಿಗೆ ಮಗುವನ್ನೂ ಕೊಟ್ಟು, ಬಳಿಕ ಸಂಸಾರ ಮಾಡೋಕೂ ಹಣ ಕೇಳಿದ್ದಾನೆ. ಇಂಥ ವಂಚಕ ಪತಿಯನ್ನು ಹುಡುಕಿಕೊಂಡು ಎರಡನೇ ಪತ್ನಿ ಇದೀಗ ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಬಂದಿದ್ದಾಳೆ.

ಈತ ಈಗಾಗಲೇ ಒಂದು ಮದುವೆ ಆಗಿದ್ದನ್ನು ಮುಚ್ಚಿಟ್ಟು, ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ. ಮದುವೆಯಾಗಿ ಒಂದು ಮಗುವಾದ ಬಳಿಕ ಸಂಸಾರ ಮಾಡಲು ಹಿಂಜರಿದ ಈತ ಅದಕ್ಕೂ ಹಣ ಕೇಳಿದ್ದಾನೆ.

400 ಗ್ರಾಂ ಚಿನ್ನಾಭರಣ, ಒಂದು ಕ್ರೆಟಾ ಕಾರು, 20 ಲಕ್ಷ ರೂಪಾಯಿ ಹಣ ಪಡೆದು ಮದುವೆಯಾಗಿದ್ದ. ಆದರೆ ಕೆಲವೇ ದಿನಗಳಲ್ಲಿ ಮೊದಲ ಮದುವೆ ವಿಚಾರ ಗೊತ್ತಾಗಿ ಪ್ರಶ್ನೆ ಮಾಡಿದ್ದಕ್ಕೆ, ಸಂಸಾರ ಮಾಡಬೇಕಂದರೆ 25 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ. ಒಪ್ಪದಿದ್ದಾಗ ಎರಡನೇ ಪತ್ನಿಯನ್ನು ಆಂಧ್ರಪ್ರದೇಶದ ಕರ್ನೂಲ್​ನ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದ. ನಂತರ ದೂರು ದಾಖಲಾದಾಗ ಪರಾರಿಯಾಗಿದ್ದ.

ಇದೀಗ ಎರಡನೇ ಪತ್ನಿ ಈತನನ್ನು ಹುಡುಕಿಕೊಂಡು ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದು ಇಲ್ಲಿನ ಜೆ.ಸಿ.ನಗರ ಪೊಲೀಸರ ಮೊರೆ ಹೋಗಿ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಸಲ್ಮಾನ್ ಪತ್ತೆಗೆ ಕ್ರಮಕೈಗೊಂಡಿದ್ದಾರೆ.