ನ್ಯೂಸ್

ರಾಜಧಾನಿಯಲ್ಲಿ ಒಂದು ವಾರ ಲಾಕ್​ಡೌನ್ ; 'ಇಷ್ಟು ಕೇಸ್ ಬಂದರೆ ಆರೋಗ್ಯ ವ್ಯವಸ್ಥೆ ಕುಸಿದೀತು' ಎಂದ ಸಿಎಂ

rashmirhebbur

ನವದೆಹಲಿ : ದಿನವೊಂದಕ್ಕೆ 25 ಸಾವಿರಕ್ಕೂ ಹೆಚ್ಚು ಕರೊನಾ ಪ್ರಕರಣಗಳು ಕಂಡುಬರುತ್ತಿರುವ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಇಂದು ರಾತ್ರಿಯಿಂದ ಏಪ್ರಿಲ್ 26 ರವರಗೆ ಒಂದು ವಾರ ಕಾಲ ಲಾಕ್​ಡೌನ್ ವಿಧಿಸಲಾಗುವುದು ಎಂದು ಸಿಎಂ ಅರವಿಂದ್​ ಕೇಜ್ರಿವಾಲ್ ಘೋಷಿಸಿದ್ದಾರೆ. ದೆಹಲಿಯಲ್ಲಿ ಕರೊನಾದ 4ನೇ ಅಲೆಯಲ್ಲಿ ಅಗಾಧ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗುತ್ತಿದ್ದು, ಹೀಗೇ ಮುಂದುವರಿದರೆ ಆರೋಗ್ಯ ವ್ಯವಸ್ಥೆ ಕುಸಿದುಬೀಳಬಹುದು ಎಂದು ಸಿಎಂ ಕಾಳಜಿ ವ್ಯಕ್ತಪಡಿಸಿದ್ದಾರೆ.

ಇಂದು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರೊಂದಿಗೆ ಸಭೆ ನಡೆಸಿದ ನಂತರ, ಸಾರ್ವಜನಿಕರಿಗೆ ಲಾಕ್​ಡೌನ್ ನಿರ್ಧಾರವನ್ನು ಕೇಜ್ರಿವಾಲ್ ತಿಳಿಸಿದ್ದಾರೆ. "ಇಂದು ರಾತ್ರಿ 10 ಗಂಟೆಯಿಂದ ದೆಹಲಿಯಲ್ಲಿ ಒಂದು ಪುಟ್ಟ ಲಾಕ್​ಡೌನ್ ವಿಧಿಸಲಾಗುವುದು. ಅಗತ್ಯ ಸೇವೆಗಳು ಮುಂದುವರಿಯುವವು. ನಿಗದಿಯಾಗಿರುವ ಮದುವೆ ಸಮಾರಂಭಗಳಿಗೆ ಕೇವಲ 50 ಜನರ ಭಾಗವಹಿಸುವಂತೆ ಅನುಮತಿ ನೀಡಲಾಗುವುದು" ಎಂದು ಅವರು ಹೇಳಿದರು.

"ಕಳೆದ ಕೆಲವು ದಿನಗಳಲ್ಲಿ ನಿತ್ಯ ಸುಮಾರು 25,000 ಪ್ರಕರಣಗಳು ವರದಿಯಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ 23,500 ಪ್ರಕರಣಗಳು ದಾಖಲಾಗಿವೆ. ಇಷ್ಟು ಅಗಾಧ ಸಂಖ್ಯೆಯ ಪ್ರಕರಣಗಳು ಜಗತ್ತಿನ ಯಾವುದೇ ಆರೋಗ್ಯ ವ್ಯವಸ್ಥೆಯನ್ನು ಕುಸಿಯುವಂತೆ ಮಾಡಬಲ್ಲದು. ದೆಹಲಿಯ ಆರೋಗ್ಯ ಮೂಲಸೌಕರ್ಯವು ಈ ಸಮಯದಲ್ಲಿ ತೀವ್ರ ಒತ್ತಡದಲ್ಲಿದೆ" ಎಂದು ಕೇಜ್ರಿವಾಲ್ ಹೇಳಿದರು.

"ಇಂದು ಬೆಳಿಗ್ಗೆ ನಗರದಲ್ಲಿ 100 ಕ್ಕಿಂತ ಕಡಿಮೆ ಐಸಿಯು ಬೆಡ್​ಗಳು ಲಭ್ಯವಿರುವುದನ್ನು ನೋಡಿದೆ" ಎಂದ ಕೇಜ್ರಿವಾಲ್, ದೆಹಲಿ ನಿವಾಸಿಗಳಿಗೆ ಲಾಕ್​ಡೌನ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದರು. "ಮುಂದಿನ 6 ದಿನಗಳಲ್ಲಿ ನಾವು ಹೆಚ್ಚು ಬೆಡ್​ಗಳ ವ್ಯವಸ್ಥೆ ಮಾಡುತ್ತೇವೆ. ನಮಗೆ ಸಹಾಯ ಮಾಡುತ್ತಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು. ಲಾಕ್​ಡೌನ್ ಅವಧಿಯನ್ನು ಆಕ್ಸಿಜನ್ ಮತ್ತು ಔಷಧಿಗಳನ್ನು ಹೊಂಚಲು ಬಳಸಲಾಗುವುದು" ಎಂದು ತಿಳಿಸಿದರು.

ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು, ರಸ್ತೆ ಮತ್ತು ಮಾರುಕಟ್ಟೆಗಳು ನಿರ್ಜನವಾಗಿದ್ದವು. ಆದಾಗ್ಯೂ ಭಾನುವಾರದಂದು 25,462 ಹೊಸ ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವಿಟಿ ರೇಟ್ ಶೇ. 29.74 ಕ್ಕೆ ಏರಿದೆ. ಅಂದರೆ, ಈಗ ಪರೀಕ್ಷಿಸಲಾಗುತ್ತಿರುವ ಮೂರು ಸ್ಯಾಂಪಲ್​ಗಳಲ್ಲಿ ಒಂದು ಪಾಸಿಟೀವ್ ಆಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)