ಇಸ್ಲಾಮಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಉತ್ತಮ ಆಡಳಿತ ನೀಡಿ, ಪಾಕಿಸ್ತಾನದ ಏಳಿಗೆಗೆ ಶ್ರಮಿಸಿ, ಒಳ್ಳೆಯ ಪ್ರಧಾನಿ ಎನಿಸಿಕೊಳ್ಳಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಆದರೆ, ಅವರು ಮಾತ್ರ ಆ ಕೆಲಸ ಬಿಟ್ಟು, ಭಾರತದ ಕಾಶ್ಮೀರ ನಿವಾಸಿಗಳ ರಾಯಭಾರಿಯಾಗಿ ಜಾಗತಿಕವಾಗಿ ಅವರ ಕಷ್ಟನಷ್ಟಗಳನ್ನು ಪ್ರಸ್ತಾಪಿಸುತ್ತೇನೆ ಎಂದು ಹೇಳುತ್ತಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಆಡಳಿತಕ್ಕೆ ಬಂದ ಕೆಲವೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಡುತ್ತಿದ್ದ ಸಂವಿಧಾನದ ವಿಧಿ 370 ಅನ್ನು ರದ್ದುಗೊಳಿಸಿತ್ತು. ಅಲ್ಲದೆ, ರಾಜ್ಯವನ್ನು ವಿಭಜಿಸಿ ಜಮ್ಮು ಮತ್ತು ಕಾಶ್ಮೀರ ಎಂಬ ಪ್ರತ್ಯೇಕ ರಾಜ್ಯವನ್ನೂ, ಲಡಾಖ್ ಎಂಬ ಕೇಂದ್ರಾಡಳಿತ ಪ್ರದೇಶವನ್ನೂ ರೂಪಿಸಿತ್ತು. ಆ ಪ್ರದೇಶದಲ್ಲಿ ಅಸ್ಥಿರತೆ ಮೂಡಿಸಲು ಸದಾ ಪ್ರಯತ್ನಿಸುವ ಪಾಕಿಸ್ತಾನಕ್ಕೆ ಇದರಿಂದ ಭಾರಿ ಇರಿಸುಮುರಿಸು ಉಂಟಾಗಿತ್ತು.
ಈ ಹಿನ್ನೆಲೆಯಲ್ಲಿ ಈ ವಿಷಯವನ್ನು ಜಾಗತಿಕ ವೇದಿಕೆಗಳಲ್ಲಿ ಪ್ರಸ್ತಾಪಿಸಿ, ಭಾರತಕ್ಕೆ ಮುಜುಗರ ಉಂಟು ಮಾಡಲು ಅಂದಿನಿಂದಲೂ ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಹಾಗೆ ಮಾಡಿ ಸಾಕಷ್ಟು ಬಾರಿ ಮುಖಭಂಗಕ್ಕೆ ಒಳಗಾಗಿದೆ. ಆದರೂ ಅದು ಬುದ್ಧಿ ಕಲಿತಿಲ್ಲ.
ಈಗಲೂ ತಮ್ಮ ರಾಷ್ಟ್ರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ಒಳ್ಳೆಯ ಪ್ರಧಾನಿ ಎನಿಸಿಕೊಳ್ಳಬೇಕಿದ್ದ ಇಮ್ರಾನ್ ಖಾನ್ ಈಗಲೂ ಕೂಡ ತಾವು ಆ ಕೆಲಸ ಮಾಡುವುದಿಲ್ಲ. ಬದಲಿಗೆ ಕಾಶ್ಮೀರಿಗಳ ರಾಯಭಾರಿಯಾಗಿ ಜಾಗತಿಕ ವೇದಿಕೆಯಲ್ಲಿ ಅವರ ಕಷ್ಟನಷ್ಟಗಳನ್ನು ಪ್ರಸ್ತಾಪಿಸುವುದಾಗಿ ಅಂಬೋ ಎನ್ನುತ್ತಿದ್ದಾರೆ.