ಹೈದರಾಬಾದ್: ಕರೊನಾ ಲಸಿಕೆ ಪಡೆದ ಬಳಿಕದ ಅವಾಂತರಗಳು ಮುಂದುವರಿದಿದ್ದು, ಇದೀಗ ಲಸಿಕೆ ಪಡೆದ ನಂತರ ಆರೋಗ್ಯ ಕಾರ್ಯಕರ್ತೆಯೊಬ್ಬರು ಮೃತಪಟ್ಟಿರುವ ಪ್ರಕರಣ ವರದಿಯಾಗಿದೆ. ಇದರೊಂದಿಗೆ ಕರೊನಾ ಲಸಿಕೆ ಹಾಕಿಸಿಕೊಂಡು ಮೃತಪಟ್ಟ ಆರೋಗ್ಯ ಕಾರ್ಯಕರ್ತರ ಸಂಖ್ಯೆ ಇಲ್ಲಿ ಮೂರಕ್ಕೇರಿದೆ.
ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಕಾಸಿಪೇಟೆ ಗ್ರಾಮದ 55 ವರ್ಷದ ಆರೋಗ್ಯ ಕಾರ್ಯಕರ್ತೆ ಕಾಸಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನವರಿ 19ರಂದು ಕರೊನಾ ಲಸಿಕೆ ಪಡೆದಿದ್ದರು. ಆ ಬಳಿಕ ಉಸಿರಾಟದ ಸಮಸ್ಯೆ, ತಲೆಸುತ್ತು ಮುಂತಾದ ಅನಾರೋಗ್ಯಕ್ಕೆ ಒಳಗಾದ ಅವರನ್ನು ಜ. 29ರಂದು ಮಂಚೇರಿಯಲ್ನ ಮೆಡ್ಲೈಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹೈದರಾಬಾದ್ನ ನಿಜಾಮ್ಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ನಿಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಜ. 30ರಂದು ಕೊನೆಯುಸಿರೆಳೆದರು. ಆದರೆ ಈ ಸಾವಿಗೆ ಬೇರೆ ಅಸ್ವಸ್ಥತೆ ಕಾರಣ, ಲಸಿಕೆಯಿಂದಾಗಿ ಸಾವು ಸಂಭವಿಸಿಲ್ಲ ಎಂದು ತೆಲಂಗಾಣದ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಇನ್ನು ಇದಕ್ಕೂ ಮುಂಚೆ ಲಸಿಕೆ ಪಡೆದಿದ್ದ ಇಬ್ಬರು ಆರೋಗ್ಯ ಕಾರ್ಯಕರ್ತರು ಸಾವಿಗೀಡಾಗಿದ್ದರು. ಆ ಪೈಕಿ ಒಬ್ಬರು ನಿರ್ಮಲ್ನಲ್ಲಿ, ಇನ್ನೊಬ್ಬರು ವಾರಂಗಲ್ನಲ್ಲಿ ಮೃತಪಟ್ಟಿದ್ದರು. ಹೀಗೆ ತೆಲಂಗಾಣದಲ್ಲಿ ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರ ಪೈಕಿ ಮೂವರು ಮೃತಪಟ್ಟಂತಾಗಿದೆ. (ಏಜೆನ್ಸೀಸ್)