ನ್ಯೂಸ್

ಫ್ಯಾಕ್ಟ್​ ಚೆಕ್ ಮೂಲಕ ಮತ್ತೆ ಮೋದಿ ಬೆಂಬಲಿಗರ ಕಾಲೆಳೆದ ನಟ ಪ್ರಕಾಶ್ ರಾಜ್

ಬೆಂಗಳೂರು: 'ಚಂದ್ರನಿಂದ ಬಂದ ಮೊದಲ ಚಿತ್ರ' ಎಂದು ಕೆಲವು ದಿನಗಳ ಹಿಂದೆ ವಿರೂಪಗೊಳಿಸಿದ ಚಾಯ್​ವಾಲ್ ಫೋಟೋ ಪೋಸ್ಟ್ ಮಾಡಿ ವಿವಾದಕ್ಕೀಡಾಗಿದ್ದ ನಟ ಪ್ರಕಾಶ್​ ರಾಜ್​, ತಮ್ಮನ್ನು ಟ್ರೋಲ್ ಮಾಡುತ್ತಿರುವ ಮೋದಿ ಬೆಂಬಲಿಗರ ಕಾಲೆಳೆಯವುದು ಮುಂದುವರಿದಿದೆ.

ವಿರೂಪಗೊಳಿಸಿದ ಚಾಯ್​ವಾಲಾ ಫೋಟೋ ಹಾಕಿದ್ದಕ್ಕೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುವ ಮೂಲಕ ಪ್ರಕಾಶ್​ ರಾಜ್ ಮೇಲೆ ಮುಗಿಬಿದ್ದಿದ್ದಾರೆ. ನಟ ಪ್ರಕಾಶ್ ರಾಜ್ ಕೂಡ ಅದಕ್ಕೆ ಕ್ಯಾರೇ ಎನ್ನದೆ ಪ್ರತಿಯಾಗಿ ಪೋಸ್ಟ್ ಮಾಡಿ ಕಾಲೆಳೆಯುವುದು ಕೂಡ ನಡೆಯುತ್ತಿದೆ.

ಈ ಮಧ್ಯೆ ಅವರು ಇನ್ನೊಂದು ವಿಚಾರವನ್ನು ಎತ್ತಿಕೊಂಡು ಮೋದಿ ಬೆಂಬಲಿಗರನ್ನು ಕೆಣಕಿದ್ದಾರೆ. ಎಐಐಎಂಎಸ್​ ದರ್ಭಾಂಗ ಆರಂಭಗೊಂಡಿದ್ದು ಕಾರ್ಯನಿರ್ವಹಿಸುತ್ತಿದೆ ಎಂದು ಇತ್ತೀಚೆಗೆ ಪ್ರಧಾನಿ ಮೋದಿ ಹೇಳಿದ್ದರು. ಆದರೆ ಪ್ರಧಾನಿ ಹೇಳಿದಂತೆ ಆಗಿಲ್ಲ. ಅಷ್ಟಕ್ಕೂ ಅದಕ್ಕಾಗಿ ಮೀಸಲಿಟ್ಟ ನಿವೇಶನ ಕೂಡ ಅಂತಿಮಗೊಂಡಿಲ್ಲ ಎಂದು ಖಾಸಗಿ ಮಾಧ್ಯಮವೊಂದರ ಫ್ಯಾಕ್ಟ್​ ಚೆಕ್​ನಲ್ಲಿ ಪ್ರಕಟಗೊಂಡಿದೆ.

ಈ ವರದಿಯನ್ನು ಉಲ್ಲೇಖಿಸಿರುವ ಪ್ರಕಾಶ್ ರಾಜ್ ಮೋದಿ ಬೆಂಬಲಿಗರನ್ನು ಉದ್ದೇಶಿಸಿ ಇನ್ನೊಂದು ಎಕ್ಸ್ ಮಾಡಿದ್ದಾರೆ. 'ನನ್ನ ದೇಶ ಧ್ವನಿ ಎತ್ತುವುದು ನಾಯಕನಾಡುವ ಸುಳ್ಳಿಗಾ.. ಇಲ್ಲ ಒಬ್ಬ ಪ್ರಜೆಯ ಹಾಸ್ಯದ ಮಾತಿಗಾ? ಎಂದು ಅವರು ಪ್ರಶ್ನಿಸಿದ್ದಾರೆ.