ನ್ಯೂಸ್

ಸ್ವತಂತ್ರ ದಿನದ ಹೊಸ್ತಿಲಲ್ಲೇ ನಿಗೂಢ​ ಸ್ಫೋಟ; ಓರ್ವ ಸಾವು, ಸ್ಥಳಕ್ಕೆ ಧಾವಿಸಿದ NIA

ಬೆಂಗಳೂರು: ಕೆಲ ತಿಂಗಳ ಹಿಂದೆ ನಗರದ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಸ್ಪೋಟದ ಘಟನೆ ಮಾಸುವ ಮುನ್ನವೇ ಇದೀಗ ಜೆಪಿ ನಗರದ ನಾಲ್ಕನೇ ಹಂತದಲ್ಲಿರುವ ಪುಟ್ಟೇನಹಳ್ಳಿಯಲ್ಲಿ ಕುಕ್ಕರ್​ ಸ್ಫೋಟಗೊಂಡಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಇನ್ನೋರ್ವನಿಗೆ ಗಂಭೀರ ಗಾಯವಾಗಿದೆ.

ಮೃತನನ್ನು ಉತ್ತರಪ್ರದೇಶ ಮೂಲದ ಮೋಸಿನ್​ ಎಂದು ಗುರುತಿಸಲಾಗಿದ್ದು, ಈತ ಜೆಪಿ ನಗರದಲ್ಲಿರುವ ಸಲೂನ್​ ಒಂದರಲ್ಲಿ ಕೆಲಸ ಮಾಡುತ್ತಿದ್ದನು. ಗಾಯಾಳು ಹೆಸರು ಸಮೀರ್​​ ಎಂದು ತಿಳಿದು ಬಂದಿದ್ದು, ಈತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಸೋಮವಾರ ಬೆಳಗ್ಗೆ 11 ಗಂಟೆಗೆ ಹೊತ್ತಿಗೆ ಈ ಸ್ಪೋಟ ಸಂಭವಿಸದೆ. ಸಲೂನ್​ನಲ್ಲಿ ಕೆಲಸ ಮಾಡುತ್ತಿದ್ದ ಯುವಕರಾದ ಸಮೀರ್​ ಹಾಗೂ ಮೋಸಿನ್​ ಅದೇ ಕಟ್ಟಡದ ಎರಡನೇ ಮಹಡಿಯಲ್ಲಿ ವಾಸವಿದ್ದರು. ಪಲಾವ್​ ಮಾಡಲೆಂದು ಸ್ಟೌ ಮೇಲೆ ಕುಕ್ಕರ್ ಇಟ್ಟು ಮಲಗಿದ್ದ ಯುವಕರು. ಈ ವೇಳೆ ಕುಕ್ಕರ್​ ಸ್ಫೋಟಗೊಂಡಿದ್ದು, ಸ್ಪೋಟದ ತೀವ್ರತೆಗೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ.

ಕುಕ್ಕರ್​ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ವೈರ್​ಗಳು ಪತ್ತೆಯಾಗಿದ್ದು, ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮೋಸಿನ್​ ಮೃತಪಟ್ಟಿದ್ದು, ಸಮೀರ್​ಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಎನ್ಐಎ ಹಾಗೂ ಕೇಂದ್ರ ತನಿಖಾ ತಂಡ ಭೇಟಿ ಪರಿಶೀಲನೆ ನಡೆಸುತ್ತಿದೆ.

ಘಟನೆ ಕುರಿತು ಮಾತನಾಡಿರುವ ನಗರ ಪೊಲೀಸ್​ ಆಯುಕ್ತ ದಯಾನಂದ್​, ಭಯೋತ್ಪಾದಕ ಕೃತ್ಯ ಅಲ್ಲ. ಕುಕ್ಕರ್ ಬ್ಲಾಸ್ ಆಗಿದೆ. ಬಳಿಕ ಶಾರ್ಟ್ ಸೆರ್ಕ್ಯೂಟ್ ಆಗಿದೆ. ಓರ್ವ ಮೃತಪಟ್ಟಿದ್ದು, ಇನ್ನೋರ್ವನಿಗೆ ಗಂಭೀರ ಗಾಯವಾಗಿದೆ. ಸ್ಥಳದಲ್ಲಿ ಮತ್ತಷ್ಟು ಪರಿಶೀಲನೆ ನಡೆಯುತ್ತಿದ್ದು, ಯುವಕರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.