ಸಿಂಗಾಪುರ್: ಲಂಡನ್ನಿಂದ ಸಿಂಗಾಪುರ್ಗೆ ಆಗಮಿಸುತ್ತಿದ್ದ ಸಿಂಗಾಪುರ್ ಏರ್‌ಲೈನ್ಸ್ ವಿಮಾನದಲ್ಲಿ ತೀವ್ರ ಪ್ರಕ್ಷುಬ್ಧತೆ ಉಂಟಾಗಿ ಓರ್ವ ಪ್ರಯಾಣಿಕ ಮೃತಪಟ್ಟು, 30 ಮಂದಿ ಗಾಯಗೊಂಡಿರುವ ಘಟನೆ ಇಂದು (ಮೇ 21) ನಡೆದಿದೆ.
ಬೋಯಿಂಗ್ 777-300ಇಆರ್ ಹೆಸರಿನ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ 211 ಪ್ರಯಾಣಿಕರು ಹಾಗೂ 18 ಸಿಬ್ಬಂದಿ ಇದ್ದರು. ಮಾರ್ಗ ಮಧ್ಯೆ ಹವಾಮಾನ ವ್ಯತ್ಯಾಸದಿಂದ ತೀವ್ರ ಪ್ರಕ್ಷುಬ್ಧತೆ ಉಂಟಾದ ಹಿನ್ನೆಲೆಯಲ್ಲಿ ವಿಮಾನವನ್ನು ಬ್ಯಾಂಕಾಕ್ ಕಡೆ ತಿರುಗಿಸಲಾಯಿತು.
ಲಂಡನ್ ಹೀಥ್ರೋನಿಂದ ಸೋಮವಾರ ನಿರ್ಗಮಿಸಿದ ವಿಮಾನ ಇಂದು ಸಿಂಗಾಪುರ್ಗೆ ಆಗಮಿಸುವ ನಿರೀಕ್ಷೆ ಇತ್ತು. ಆದಾಗ್ಯೂ ಅನಿರೀಕ್ಷಿತ ಪ್ರಕ್ಷುಬ್ಧತೆಯಿಂದಾಗಿ ಬ್ಯಾಂಕಾಕ್ ಕಡೆ ತಿರುಗಿಸಲಾಗಿದೆ. ಈ ಘಟನೆಯಲ್ಲಿ ಓರ್ವ ಸಾವಿಗೀಡಾಗಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಕಾಲಮಾನ 3.45ರ ಸುಮಾರಿಗೆ ವಿಮಾನ ಬ್ಯಾಂಕಾಕ್ನಲ್ಲಿ ಲ್ಯಾಂಡ್ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವಿಮಾನ ಲ್ಯಾಂಡ್ ಆದ ಕೂಡಲೇ ತೊಂದರೆಗೆ ಒಳಗಾದ ಪ್ರಯಾಣಿಕರಿಗೆ ತಕ್ಷಣವೇ ತುರ್ತು ಸೇವೆಯನ್ನು ನೀಡಲಾಗಿದೆ. ಪ್ರಯಾಣಿಕರೊಬ್ಬರ ಸಾವಿಗೆ ಸಂತಾಪ ಸೂಚಿಸಿರುವ ಸಿಂಗಾಪುರ್ ಏರ್‌ಲೈನ್ಸ್ ಕುಟುಂಬಕ್ಕೆ ಸಾಂತ್ವಾನ ಹೇಳಿದೆ. ಅಲ್ಲದೆ, ಗಾಯಗೊಂಡಿರುವ ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುವುದು ತಮ್ಮ ಆದ್ಯತೆಯಾಗಿದೆ ಎಂದು ಭರವಸೆ ನೀಡಿದೆ.
ಇತ್ತೀಚಿನ ವರದಿಯ ಪ್ರಕಾರ, ಪ್ರಕ್ಷುಬ್ಧತೆಯಲ್ಲಿ ಗಾಯಗೊಂಡವರಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸಲು ಥೈಲ್ಯಾಂಡ್‌ನ ಸ್ಥಳೀಯ ಅಧಿಕಾರಿಗಳೊಂದಿಗೆ ಸಹಕರಿಸಲು ಪ್ರಯತ್ನಗಳು ನಡೆಯುತ್ತಿವೆ. ಸಿಂಗಾಪುರ್ ಏರ್‌ಲೈನ್ಸ್ ಸಹ ವಿಶೇಷ ತಂಡವೊಂದನ್ನು ಬ್ಯಾಂಕಾಕ್‌ಗೆ ಕಳುಹಿಸುತ್ತಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)