ನ್ಯೂಸ್

ಪಹಲ್ಗಾಮ್​ ದಾಳಿಯಿಂದಾಗಿ ಪ್ರತಿಯೊಬ್ಬ ಭಾರತೀಯನು ಕೋಪದಿಂದ ಹೊತ್ತಿ ಉರಿಯುತ್ತಿದ್ದಾನೆ: ಪ್ರಧಾನಿ ಮೋದಿ | Mann Ki Baat

Mann Ki Baat : ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಇಡೀ ಜಗತ್ತೇ ಖಂಡಿಸಿದೆ. ಅಲ್ಲದೆ, ಮೃತರಿಗೆ ಸಂತಾಪ ಸೂಚಿಸಿದೆ. ಈ ಘಟನೆಯಿಂದ ಪ್ರತಿಯೊಬ್ಬ ಭಾರತೀಯನು ಕೋಪದಿಂದ ಹೊತ್ತಿ ಉರಿಯುತ್ತಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಂದು (ಏಪ್ರಿಲ್​ 27) ನಡೆದ 121ನೇ ಆವೃತ್ತಿಯ ಮನ್​ ಕಿ ಬಾತ್​ ಬಾನುಲಿ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪಹಲ್ಗಾಮ್​ ಘಟನೆಯಿಂದ ನನ್ನ ಹೃದಯ ತುಂಬಾ ದುಃಖಿತವಾಗಿದೆ ಎಂದರು.

ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ತಮ್ಮ ಹೇಡಿತನವನ್ನು ತೋರಿಸಿದ್ದಾರೆ. ಶತ್ರುಗಳಿಗೆ ನಮ್ಮ ದೇಶದ ಅಭಿವೃದ್ಧಿ ಸ್ವಲ್ಪವೂ ಇಷ್ಟವಿಲ್ಲ. ಹೀಗಾಗಿ ಈ ದಾಳಿ ಮಾಡಿದ್ದಾರೆ. ಆದರೆ, ದಾಳಿ ಮಾಡಿದ ಭಯೋತ್ಪಾದಕರನ್ನು ನಾವು ಸುಮ್ಮನೇ ಬಿಡುವುದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಭಯೋತ್ಪಾದನೆಯ ವಿರುದ್ಧ ಇಡೀ ಜಗತ್ತು ಭಾರತದ ಬೆಂಬಲಕ್ಕೆ ನಿಂತಿದೆ. ಪಹಲ್ಗಾಮ್‌ನ ಸಂತ್ರಸ್ತರಿಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.

ಜಾಗತಿಕ ನಾಯಕರು ನನಗೆ ಕರೆ ಮಾಡಿದ್ದಾರೆ, ಪತ್ರಗಳನ್ನು ಬರೆದಿದ್ದಾರೆ ಹಾಗೂ ಸಂದೇಶಗಳನ್ನು ಕಳುಹಿಸಿದ್ದಾರೆ. ಈ ಘೋರ ಭಯೋತ್ಪಾದಕ ದಾಳಿಯನ್ನು ಎಲ್ಲರೂ ಬಲವಾಗಿ ಖಂಡಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ಇಡೀ ಜಗತ್ತು 1.4 ಬಿಲಿಯನ್ ಭಾರತೀಯರೊಂದಿಗೆ ನಿಂತಿದೆ. ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗುತ್ತದೆ ಎಂದು ಮತ್ತೊಮ್ಮೆ ನಾನು ಭರವಸೆ ನೀಡುತ್ತೇನೆ. ಈ ದಾಳಿಯ ಪಿತೂರಿಗಾರರು ಮತ್ತು ಅಪರಾಧಿಗಳು ಅತ್ಯಂತ ಕಠಿಣ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಕಾಶ್ಮೀರದಲ್ಲಿ ಶಾಂತಿ ಮರಳುತ್ತಿದೆ. ಪ್ರಜಾಪ್ರಭುತ್ವ ಬಲಗೊಳ್ಳುತ್ತಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಇದ್ಯಾವುದು ಕೂಡ ಶತ್ರುಗಳಿಗೆ ಇಷ್ಟವಿಲ್ಲ. ಭಯೋತ್ಪಾದಕ ನಾಯಕರು ಮತ್ತೆ ಕಾಶ್ಮೀರವನ್ನು ನಾಶಮಾಡಲು ಬಯಸುತ್ತಾರೆ. ಅದಕ್ಕಾಗಿಯೇ ಅವರು ಹಲವು ಪಿತೂರಿಗಳನ್ನು ರೂಪಿಸುತ್ತಿದ್ದಾರೆ. ಈ ಸಮಯದಲ್ಲಿ, ನಾವು ನಮ್ಮ ಸಂಕಲ್ಪವನ್ನು ಬಲಪಡಿಸಬೇಕು. ನಾವು ಈ ಸವಾಲನ್ನು ಧೈರ್ಯದಿಂದ ಎದುರಿಸಬೇಕು. ದಾಳಿ ನಡೆಸಿದವರಿಗೆ ನಾವು ಕಠಿಣ ಶಿಕ್ಷೆಯನ್ನು ನೀಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಇಸ್ರೋ ಮುಖ್ಯಸ್ಥ ಮತ್ತು ವಿಜ್ಞಾನಿ ಕೆ. ಕಸ್ತೂರಿರಂಗನ್ ಅವರಿಗೆ ಗೌರವ ಸಲ್ಲಿಸಿದರು. ಕಸ್ತೂರಿರಂಗನ್ ತಮ್ಮ ಜೀವನದುದ್ದಕ್ಕೂ ನಿಸ್ವಾರ್ಥವಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಕ್ಕಾಗಿ ಅವರನ್ನು ಶ್ಲಾಘಿಸಿದರು. ದೇಶದ ಅಭಿವೃದ್ಧಿಗೆ ಅವರ ಕೊಡುಗೆಯನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದರು. (ಏಜೆನ್ಸೀಸ್​)