ಎರಡನೇ ಡೋಸ್ ಲಸಿಕೆ ಪಡೆಯಲು ಬೆಂಗಳೂರಿನಲ್ಲಿ ನೂಕುನುಗ್ಗಲು. 
ನ್ಯೂಸ್

13 ದೇಶಕ್ಕೆ ಹಬ್ಬಿದ ಒಮಿಕ್ರಾನ್: ಅತಿ ಹೆಚ್ಚಿನ ಅಪಾಯ, ಡಬ್ಲ್ಯುಎಚ್​ಒ ಗಂಭೀರ ಎಚ್ಚರಿಕೆ..

Webdesk - Ravikanth

ಜಿನೇವಾ/ಬೆಂಗಳೂರು: ತೀವ್ರ ಕಟ್ಟೆಚ್ಚರ, ಮುನ್ನೆಚ್ಚರಿಕೆ ಕ್ರಮಗಳ ಹೊರತಾಗಿಯೂ ಕರೊನಾ ವೈರಸ್​ನ ಹೊಸ ಪ್ರಭೇದ ಒಮಿಕ್ರಾನ್ 13 ರಾಷ್ಟ್ರಗಳಿಗೆ ವ್ಯಾಪಿಸಿದ್ದು ಜಾಗತಿಕವಾಗಿ ಆತಂಕಕ್ಕೀಡು ಮಾಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಹೊಸ ರೂಪಾಂತರಿ ಇನ್ನಷ್ಟು ದೇಶಗಳಿಗೆ ಹರಡುವ ಸಾಧ್ಯತೆಯಿದ್ದು, ‘ಅತಿ ಹೆಚ್ಚಿನ ಅಪಾಯ’ (ವೆರಿ ಹೈ ರಿಸ್ಕ್) ಒಡ್ಡಿ ಕೆಲವು ಭಾಗಗಳಲ್ಲಿ ‘ಗಂಭೀರ ಪರಿಣಾಮ’ ಸೃಷ್ಟಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಸೋಮವಾರ ಗಂಭೀರ ಎಚ್ಚರಿಕೆ ರವಾನಿಸಿದೆ. ಇತ್ತ ಭಾರತದಲ್ಲೂ ಒಮಿಕ್ರಾನ್ ತಡೆಗೆ ಮತ್ತಷ್ಟು ಕಠಿಣ ಕ್ರಮಕೈಗೊಳ್ಳಲಾಗಿದೆ. ಸದ್ಯ ರಾಜ್ಯದಲ್ಲಿ ಮತ್ತೆ ಲಾಕ್​ಡೌನ್ ಜಾರಿಗೊಳಿಸುವ ಹಾಗೂ ಶಾಲೆಗಳನ್ನು ಮುಚ್ಚುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಹೊಸ ಸೋಂಕಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಡಬ್ಲ್ಯುಎಚ್​ಒ, ಸವಾಲನ್ನು ಎದುರಿಸಲು ಜಗತ್ತು ಸಿದ್ಧಗೊಳ್ಳಬೇಕಿದೆ ಎಂಬ ಸಂದೇಶ ರವಾನಿಸಿದೆ. ಅಧಿಕ-ಆದ್ಯತಾ ಗುಂಪುಗಳಿಗೆ ಲಸಿಕೆ ನೀಡಿಕೆಯ ವೇಗ ಹೆಚ್ಚಿಸಬೇಕು ಹಾಗೂ ಪರಿಸ್ಥಿತಿ ಎದುರಿಸಲು ಅಗತ್ಯ ಆರೋಗ್ಯ ಸೇವೆಗಳನ್ನು ಸನ್ನದ್ಧ ವಾಗಿರಿಸುವಂತೆ 194 ಸದಸ್ಯ ದೇಶಗಳಿಗೆ ಕಳಿಸಿರುವ ತಾಂತ್ರಿಕ ಸಲಹೆಯಲ್ಲಿ ಡಬ್ಲ್ಯುಎಚ್​ಒ ಸೂಚಿಸಿದೆ. ಒಮಿಕ್ರಾನ್​ನಲ್ಲಿ ಅಭೂತಪೂರ್ವ ಸಂಖ್ಯೆಯ ಸ್ಪೈಕ್ ರೂಪಾಂತರಿಗಳಿವೆ. ಆ ಪೈಕಿ ಕೆಲವು ಸ್ಪೈಕ್​ಗಳು ಸಾಂಕ್ರಾಮಿಕತೆಯ ಹಾದಿಯಲ್ಲಿ ಕಳವಳಕಾರಿ ಪರಿಣಾಮ ಬೀರುವಂಥದ್ದಾಗಿವೆ ಎಂದು ಹೇಳಿದೆ. ಒಮಿಕ್ರಾನ್​ನ ಒಟ್ಟಾರೆ ಜಾಗತಿಕ ರಿಸ್ಕ್ ಅತಿ ಹೆಚ್ಚು ಎಂದು ಅಂದಾಜು ಮಾಡಲಾಗಿದೆ ಎಂದು ಡಬ್ಲ್ಯುಎಚ್​ಒ ಸ್ಪಷ್ಟಪಡಿಸಿದೆ.

ಎಲ್ಲೆಲ್ಲಿ ಒಮಿಕ್ರಾನ್?: ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಬೆಲ್ಜಿಯಂ, ಬೋಟ್ಸ್ ವಾನಾ, ಬ್ರಿಟನ್, ಕೆನಡಾ, ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ, ಹಾಂಕಾಂಗ್, ಇಸ್ರೇಲ್, ಇಟಲಿ ಮತ್ತು ನೆದರ್​ಲ್ಯಾಂಡ್.

ದಕ್ಷಿಣ ಆಫ್ರಿಕಾದಿಂದ ಆಗಮಿಸಿರುವ ವ್ಯಕ್ತಿಗೆ ವಿಭಿನ್ನ ಲಕ್ಷಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಾಗಿ ಐಸಿಎಂಆರ್​ಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಯಾವ ತಳಿ ಎಂಬುದು ತಿಳಿಯಲಿದೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ರಾಜ್ಯದಲ್ಲಿ ಲಾಕ್​ಡೌನ್ ಪ್ರಸ್ತಾವನೆ ಇಲ್ಲ, ಸಿಎಂ ಬೊಮ್ಮಾಯಿ ಸ್ಪಷ್ಟನೆ

ದಾವಣಗೆರೆ/ತುಮಕೂರು: ಒಮಿಕ್ರಾನ್ ಆತಂಕವಿದ್ದರೂ ರಾಜ್ಯದಲ್ಲಿ ಲಾಕ್​ಡೌನ್ ಮಾಡುವ ಪ್ರಸ್ತಾವನೆ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಶಾಲಾ ಕಾಲೇಜು ಮೇಲೆ ನಿಗಾ ಇಡಲು ಸೂಚಿಸಿದ್ದೇವೆ, ಅವುಗಳನ್ನು ಮುಚ್ಚಲು ತಿಳಿಸಿಲ್ಲ ಎಂದರು. ಒಮಿಕ್ರಾನ್ ಕುರಿತು ಜನತೆ ಭಯಪಡದೆ, ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ರೂಪಾಂತರಿ ವೈರಸ್ ಕಾಣಿಸಿಕೊಂಡ ದೇಶಗಳಿಂದ ಬಂದಿರುವ ಪ್ರಯಾಣಿಕರ ಮೇಲೆ ನಿಗಾ ಇರಿಸಿದ್ದು, ಅವರ ಸಂರ್ಪತರನ್ನು ಪತ್ತೆ ಹಚ್ಚಿ ಪರೀಕ್ಷಿಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿಯೂ ಕಟ್ಟು ನಿಟ್ಟಿನ ಪರೀಕ್ಷೆ ಮಾಡುತ್ತಿದ್ದು, ವರದಿ ನೆಗೆಟಿವ್ ಇದ್ದರೆ ಮಾತ್ರ ನಗರ ಪ್ರವೇಶಕ್ಕೆ ಅನುಮತಿ ನೀಡಲಾಗು ತ್ತಿದೆ ಎಂದು ಹೇಳಿದರು. ಕೇರಳದಿಂದ ಆಗಮಿಸಿರುವ ವಿದ್ಯಾರ್ಥಿಗಳಿಗೆ ಎಲ್ಲ ಜಿಲ್ಲೆಗಳಲ್ಲಿ ಪರೀಕ್ಷೆ ಮಾಡುವುದು ಕಡ್ಡಾಯ ಎಂದರು.

ಏಳನೇ ದಿನಕ್ಕೆ ಮತ್ತೊಮ್ಮೆ ಪರೀಕ್ಷೆ ಮಾಡಲು ಸೂಚಿಸಲಾಗಿದೆ ಎಂದರು. ಜನರು ಹೆಚ್ಚಾಗಿ ಗುಂಪು ಸೇರುವುದನ್ನು ತಡೆಯಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು. ಬೂಸ್ಟರ್ ಡೋಸ್ ಬಗ್ಗೆ ಕೇಂದ್ರ ಸರ್ಕಾರದಿಂದ ನಿರ್ದೇಶನ ಬರಬೇಕಿದೆ. ಆರೋಗ್ಯ ಕಾರ್ಯಕರ್ತರ ಬಗ್ಗೆ ನಮ್ಮ ಕಾಳಜಿಯಿದೆ. ಈಗಾಗಲೇ ಅವರು ಎರಡು ಡೋಸ್ ಪಡೆದು 6 ತಿಂಗಳ ಮೇಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ವಹಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.

ಒಮಿಕ್ರಾನ್ ಬಗ್ಗೆ ಜನರಿಗೆ ಆತಂಕ ಬೇಡ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಕ್​ಡೌನ್ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು. ಎರಡು ಬಾರಿ ಅಲೆ ಅಪ್ಪಳಿಸಿದ ಕಾಲಕ್ಕೆ ವಿಧಿಸಿದ ಲಾಕ್​ಡೌನ್​ನಿಂದ ಜನರು ಸಾಕಷ್ಟು ನೊಂದು ಬೆಂದಿದ್ದಾರೆ. ಜೀವ ಹಾನಿಗಳಾಗಿವೆ, ಉದ್ಯೋಗ- ಆರ್ಥಿಕ ನಷ್ಟಗಳಾಗಿವೆ. ತೀರಾ ಕುಸಿದು ಹೋಗಿರುವ ಜನಜೀ ವನದ ಮೇಲೆ ಲಾಕ್​ಡೌನ್ ಹೇರುವ ಚಿಂತನೆಯೇ ಮಾಡಿಲ್ಲ. ಈ ವಿಷಯದಲ್ಲಿ ಸಾಮಾಜಿಕ ಜಾಲತಾಣಗಳು ತಪು್ಪ ಮಾಹಿತಿ ಹರಡಬಾರದು ಎಂದರು.

ವಾಂತಿ, ಸುಸ್ತು, ಪಲ್ಸ್ ರೇಟ್ ಹೆಚ್ಚಳ ಈ ಸೋಂಕಿನ ಲಕ್ಷಣಗಳು ಎಂದು ವಿವರಿಸಿದ್ದಾರೆ. ಇದು, ಅಧಿಕೃತ ಮಾಹಿತಿಯಲ್ಲ. ರಾಜ್ಯಕ್ಕೆ ಈ ವೈರಾಣು ಕಾಲಿಟ್ಟಿದೆಯೋ ಇಲ್ಲವೋ ಎಂದು ತಿಳಿಯಲು ಜಿನೋಮಿಕ್ ಸೀಕ್ವೆನ್ಸಿ ಲ್ಯಾಬ್ ವರದಿಗಾಗಿ ಕಾಯುತ್ತಿದ್ದು, ಡಿ.1ರವೇಳೆಗೆ ಲಭ್ಯವಾಗಲಿದೆ ಎಂದರು.

ವಿದೇಶಿಗರ ಮೇಲೆ ನಿಗಾ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲು ಸೂಚಿಸಲಾಗಿದ್ದು, ಕಳೆದ 10-12 ದಿನಗಳಲ್ಲಿ ವಿದೇಶದಿಂದ ರಾಜ್ಯಕ್ಕೆ ಬಂದವರ ಮೇಲೂ ನಿಗಾವಹಿಸಿ, ಸಂರ್ಪತರ ಪತ್ತೆ ಹಚ್ಚಲಾಗುತ್ತಿದೆ. ಒಮಿಕ್ರಾನ್ ತಳಿ ಬೆಳವಣಿಗೆ ಕುರಿತು ಐಸಿಎಂಆರ್ ಮತ್ತು ಕೇಂದ್ರದ ಆರೋಗ್ಯ ಇಲಾಖೆ ಜತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದರು.

28 ವಿದ್ಯಾರ್ಥಿಗಳಿಗೆ ಸೋಂಕು

ಬೆಂಗಳೂರು: ಕೇರಳದಿಂದ ಬಂದಿದ್ದ 8 ವಿದ್ಯಾರ್ಥಿಗಳೂ ಸೇರಿದಂತೆ ರಾಜ್ಯದಲ್ಲಿ ಮತ್ತೆ 28 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ತುಮಕೂರು ಸಿದ್ಧಗಂಗಾ ನರ್ಸಿಂಗ್ ಕಾಲೇಜಿನಲ್ಲಿ ವಾರದ ಹಿಂದಷ್ಟೇ ಕೇರಳದಿಂದ ಆಗಮಿಸಿರುವ 8 ವಿದ್ಯಾರ್ಥಿಗಳಿಗೆ ಸೋಮವಾರ ಕರೊನಾ ದೃಢವಾಗಿದ್ದು ಒಟ್ಟು 180 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಮವಾರ ಒಟ್ಟು 23 ಜನರಿಗೆ ಸೋಂಕು ದೃಢವಾಗಿದ್ದು ತುಮಕೂರಿನಲ್ಲಿಯೇ 18 ಪ್ರಕರಣ ದಾಖಲಾಗಿದೆ. ಕಳೆದೊಂದು ತಿಂಗಳಲ್ಲಿ ಜಿಲ್ಲೆಗೆ ಬಂದಿರುವ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕರೊನಾ ಪರೀಕ್ಷೆ ಕಡ್ಡಾಯಗೊಳಿಸಿ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಆದೇಶಿಸಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಗೂರಮಾರನಹಳ್ಳಿ ಬಳಿಯಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ 14 ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಚಾಮರಾಜನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ 6 ವಿದ್ಯಾರ್ಥಿಗಳಿಗೆ ಭಾನುವಾರ ಕರೊನಾ ಸೋಂಕು ದೃಢಪಟ್ಟಿದ್ದು, ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಸಂಪರ್ಕದಲ್ಲಿದ್ದ 500 ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ.