ನ್ಯೂಸ್

ಭಾರತಕ್ಕೆ ಒಮಿಕ್ರಾನ್​ ಪ್ರವೇಶ; ಆತಂಕ ಬೇಡ ಎನ್ನುತ್ತಲೇ ಸರ್ಕಾರ ನೀಡಿದೆ ಎಚ್ಚರಿಕೆ

ನವದೆಹಲಿ: ಜಗತ್ತಿನ ಹಲವು ರಾಷ್ಟ್ರಗಳಲ್ಲಿ ತಲ್ಲಣ ಮೂಡಿಸಿದ್ದ ಒಮಿಕ್ರಾನ್​ ಭಾರತ ಪ್ರವೇಶಿಸಿದ್ದಾಗಿದೆ. ಕರ್ನಾಟಕದಲ್ಲೇ ಇಬ್ಬರು ಪುರುಷರಲ್ಲಿ ಕಂಡುಬಂದಿರುವ ಕರೊನಾ ಸೋಂಕಿಗೆ ಈ ಹೆಚ್ಚು ಹರಡುವ ರೂಪಾಂತರಿ ಕಾರಣವಾಗಿರುವುದು ಜಿನೋಮ್ ಸೀಕ್ವೇಂಸಿಂಗ್​ನಿಂದ ತಿಳಿದುಬಂದಿದೆ. ಈ ಹೊತ್ತಲ್ಲಿ ಜನರು ಮಾಡಬೇಕಾದ್ದೇನು ಎಂಬುದನ್ನು ಕೇಂದ್ರ ಸರ್ಕಾರ ವಿವರಿಸಿದೆ.

"ಆತಂಕ ಪಡುವ ಅಗತ್ಯವಿಲ್ಲ. ಆದರೆ, ಜಾಗೃತಿ ಮೂಡಿಸುವುದು ಸಂಪೂರ್ಣ ಅವಶ್ಯಕ. ಕೋವಿಡ್​​ ಸೂಕ್ತ ನಡವಳಿಕೆ ಅವಶ್ಯಕ" ಎಂದು ಐಸಿಎಂಆರ್​ ಡೈರೆಕ್ಟರ್​ ಜನರಲ್​ ಬಲರಾಂ ಭಾರ್ಗವ ಹೇಳಿದ್ದಾರೆ. ಮಾಸ್ಕ್​ ತೊಡುವುದು, ಸಾಮಾಜಿಕ ಅಂತರ ಪಾಲಿಸುವುದು, ಶುಚಿತ್ವ ಕಾಪಾಡುವುದು ಎಲ್ಲಾ ಈಗ ಮತ್ತೆ ಹೆಚ್ಚಿನ ಮಹತ್ವ ಪಡೆದಿವೆ.

ಮತ್ತೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋಗದೇ ಇರುವುದು, ಜನ ಸೇರುವಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಿರುವುದು ಮುಂತಾಗಿ ಎಚ್ಚರ ವಹಿಸಿದರೆ ಒಮಿಕ್ರಾನ್​ ಹರಡುವಿಕೆಯನ್ನು ತಡೆಯಬಹುದು. ಕರೊನಾ ಲಸಿಕೆಯ ಎರಡೂ ಡೋಸ್​ಗಳನ್ನು ಎಲ್ಲರೂ ಪಡೆಯುವಂತೆ ಕ್ರಮ ಕೈಗೊಳ್ಳುವುದು ಈಗಿನ ಅಗತ್ಯ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. (ಏಜೆನ್ಸೀಸ್)