ನ್ಯೂಸ್

ಮಹಿಳೆಯರಿಗೆ ಪ್ರಯಾಣ ಉಚಿತ ಎಂದು ಇಡೀ KSRTC ಬಸ್​ ಬುಕ್​ ಮಾಡಲು ಬಂದ ಅಜ್ಜಿ!

ಬೆಂಗಳೂರು: ಕೆಎಸ್​ಆರ್​ಟಿಸಿ ಬಸ್​ ಉಚಿತವಾದ ನಂತರ ನಾನಾ ರೀತಿಯ ಸುದ್ದಿಗಳು ಕೇಳಿಬರುತ್ತಿವೆ. ಕೆಲವು ಕಡೆ ನಿರ್ವಾಹಕರಿಗೂ ಪ್ರಯಾಣಿಕರಿಗೂ ಜಗಳವಾದಲ್ಲಿ ಇನ್ನೂ ಕೆಲವು ಕಡೆ ನೂಕು ನುಗ್ಗಲು ಉಂಟಾಗುತ್ತಿದೆ. ಇಲ್ಲೊಬ್ಬರು ಅಜ್ಜಿ, ಹೇಗಿದ್ದರೂ ಉಚಿತ ಪ್ರಯಾಣ ಇದೆ ಎಂದು ಒಂದು ಬಸ್ಸನ್ನೇ ಬುಕ್​ ಮಾಡಲು ಮಾಹಿತಿ ಕೇಂದ್ರಕ್ಕೆ ಬಂದಿದ್ದಾರೆ.

ಇಡೀ ಬಸ್ಸಿನ 48 ಸೀಟುಗಳನ್ನು ರಿಸರ್ವ್ ಮಾಡಲು ವಿಚಾರಣಾ ವಿಭಾಗಕ್ಕೆ ಬಂದು ವಿಚಾರಿಸಿದ ಅಜ್ಜಿಯ ಎಕ್ಸ್​ಕ್ಲೂಸಿವ್​ ದೃಶ್ಯಗಳು ದಿಗ್ವಿಜಯ ನ್ಯೂಸ್​ಗೆ ಲಭಿಸಿವೆ.

ಮೆಜೆಸ್ಟಿಕ್​ನ KSRTC enquiry ಕೌಂಟರ್​ಗೆ ಬಂದ ಅಜ್ಜಿ ಸುನಂದಾ, ಯಾವ್ಯಾವ ಮಾರ್ಗಗಳಿಗೆ ಎಷ್ಟು ಘಂಟೆಗೆ ಬಸ್​ಗಳ ವ್ಯವಸ್ಥೆಯಿದೆ ಎಂಬ ಮಾಹಿತಿ ಪಡೆದು ಪೇಪರ್​ನಲ್ಲಿ ಬರೆದುಕೊಂಡಿದ್ದಾರೆ.

ಸುನಂದಾ ಬೆಂಗಳೂರಿನ ಬ್ಯಾಡರಹಳ್ಳಿಯ ನಿವಾಸಿಯಾಗಿದ್ದು ತಮ್ಮ ಇಡೀ ತಂಡದೊಂದಿಗೆ 4-5 ದಿನಗಳ ಕಾಲ ಧಾರ್ಮಿಕ ಕ್ಷೇತ್ರಗಳ ವಿಸಿಟ್​ಗೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇವರು ಸದ್ಯ 20 ಜನರ ತಂಡ ಮಾಡಿಕೊಂಡಿದ್ದು, ಇನ್ನೂ 20 ಜನರನ್ನು ಸೇರಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಅಜ್ಜಿಯ ಹಂಚಿಕೆ ಪ್ರಕಾರ ಮನೆಯ ಮಹಿಳಾ ಕುಟುಂಬಸ್ಥರು ಹಾಗೂ ಮಹಿಳಾ ಸಂಘ ಸಂಸ್ಥೆಯವರು ಸೇರಿ ಒಟ್ಟು 48 ಜನ್ರ ಸೀಟ್ ರಿಸರ್ವ್ ಮಾಡಿಕೊಳ್ಳಲಾಗುತ್ತದೆ. (ದಿಗ್ವಿಜಯ ನ್ಯೂಸ್​)