ನ್ಯೂಸ್

ಓ ಮೈ ಗಾಡ್ 2 ಸಿನಿಮಾ ವಿಮರ್ಶೆ: ಬೋಲ್ಡ್ ಸಂದೇಶ ನೀಡುವ ಚಿತ್ರ

ಚಿತ್ರ: ಓ ಮೈ ಗಾಡ್ 2
ನಿರ್ದೇಶನ: ಅಮಿತ್ ರೈ
ನಿರ್ಮಾಣ: ವಿಪುಲ್.ಡಿ.ಶಾ, ರಾಜೇಶ್ ಬೆಹ್ಲ್
ತಾರಾಗಣ: ಪಂಕಜ್ ತ್ರಿಪಾಠಿ, ಅಕ್ಷಯ್ ಕುಮಾರ್, ಯಾಮಿ ಗೌತಮ್, ಪವನ್ ಮಲ್ಹೋತ್ರಾ, ಮುಂತಾದವರು

‘ಓ ಮೈ ಗಾಡ್ 2’ ಸಿನಿಮಾ ಬಗ್ಗೆ ಹೇಳುವ ಮೊದಲು ಒಮ್ಮೆ ’ಓ ಮೈ ಗಾಡ್’ ಸಿನಿಮಾ ನೆನಪಿಸಿಕೊಳ್ಳಬೇಕು. 2012ರಲ್ಲಿ ಬಿಡುಗಡೆಯಾದ ಉಮೇಶ್ ಶುಕ್ಲಾ ನಿರ್ದೇಶನದ ಪರೇಶ್ ರಾವಲ್ ಹಾಗೂ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಆ ಚಿತ್ರ ಎಲ್ಲರ ಮನ ಗೆದ್ದಿತ್ತು. ದೇವರು ಎಲ್ಲರಲ್ಲೂ ಇರುತ್ತಾನೆ ಎಂಬ ಸಂದೇಶವಿದ್ದ ಸಿನಿಮಾ. ಅದಕ್ಕೆ ಪೂರಕವಾಗಿ ಪರೇಶ್ ರಾವಲ್ ಹಾಗೂ ದೇವರ ಪಾತ್ರದಲ್ಲಿ ಅಕ್ಷಯ್ ಎಲ್ಲರ ಗಮನ ಸೆಳೆದಿದ್ದರು. ಅದೇ ಚಿತ್ರದ ಸೀಕ್ವೆಲ್ ‘ಓ ಮೈ ಗಾಡ್ 2’. ಮೊದಲ ಚಿತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ಹೋದರೆ ಬಹುಶಃ ನಿರಾಸೆ ಆಗಬಹುದು. ಆದರೆ ಒಂದು ಗಟ್ಟಿ ಸಂದೇಶವನ್ನು ನೀಡುವ ಉದ್ದೇಶದಿಂದಲೇ ಅಮಿತ್ ರೈ ಈ ಸೀಕ್ವೆಲ್ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.

ಹದಿಹರೆಯದ ಮಕ್ಕಳು ಲೈಂಗಿಕ ಶಿಕ್ಷಣದ ಕೊರತೆಯಿಂದ ಏನೆಲ್ಲ ಅವಾಂತರಗಳನ್ನು ಮಾಡಿಕೊಳ್ಳಬಹುದು? ಸಮಾಜ ಹೇಗೆ ಪ್ರತಿಕ್ರಿಯಿಸಬಹುದು? ಎನ್ನುವ ಸೂಕ್ಷ್ಮ ಸಂಗತಿಯನ್ನು ಚಿತ್ರದ ರೂಪದಲ್ಲಿ ಹೇಳಿದ್ದಾರೆ ನಿರ್ದೇಶಕ ಅಮಿತ್ ರೈ. ಹೀಗಾಗಿಯೇ ಇದು ‘ಎ’ ಪ್ರಮಾಣಿತ ಚಿತ್ರ. ಇಂತಹದೊಂದು ಸೂಕ್ಷ್ಮ ವಿಷಯವನ್ನು ಕಾಲೇಜಿನ ಮಟ್ಟದಲ್ಲಿಯೇ ಶಿಕ್ಷಣದಲ್ಲಿ ತಿಳಿಸಬೇಕು ಎನ್ನುವುದು ನಿರ್ದೇಶಕರ ಆಶಯ. ಇದರಿಂದ ಒಳ್ಳೆಯ ಪರಿಣಾಮದ ಕುರಿತು ತೋರಿಸಿದ್ದಾರೆ ಹೊರತು, ನೆಗೆಟಿವ್ ಎೆಕ್ಟ್ ಬಗ್ಗೆ ಕೂಡ ಬೆಳಕು ಚೆಲ್ಲಿದ್ದರೆ ಸಿನಿಮಾ ಏಕತಾನತೆಯ ರೂಪ ಪಡೆದುಕೊಳ್ಳದೆ ಇನ್ನಷ್ಟು ಗಟ್ಟಿಯಾಗುತ್ತಿತ್ತು. ಈ ಕಥೆಗೆ ಪೂರಕವಾಗುವಂತೆ ಕೆಲವು ಪುರಾಣ, ಉಪನಿಷತ್‌ಗಳ ಸಹಾಯ ನಾಜೂಕಾಗಿ ಚಿತ್ರಿಸಿದ್ದಾರೆ.

ಶಾಲೆಯಲ್ಲಿ ನಡೆಯುವ ಘಟನೆಯೊಂದರಿಂದ ಮಾನಸಿಕ ಖಿನ್ನತೆಗೆ ಒಳಗಾಗುವ ಮಗನ ಪರವಾಗಿ ಕೋರ್ಟ್ ಮೆಟ್ಟಿಲೇರುವ, ಶಿವನ ಭಕ್ತನ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ಕಾಣಿಸಿಕೊಂಡಿದ್ದಾರೆ. ಮೊದರ್ಧ ಪಾತ್ರಗಳ ಪರಿಚಯ ಮಾಡಿಸಲಾಗಿದ್ದು, ದ್ವಿತೀಯಾರ್ಧದ ನ್ಯಾಯಾಲದಲ್ಲಿ ಕಥೆ ಸಾಗುತ್ತದೆ. ಪಂಕಜ್ ತ್ರಿಪಾಠಿ ಮುಗ್ಧ ಹಾಸ್ಯ ಭರಿತ ಅಭಿನಯ ಸಿನಿಮಾದ ಹೈಲೈಟ್. ಅವರೆದುರು ವಾದ ಮಂಡಿಸುವ ವಕೀಲೆ ಯಾಮಿ ಗೌತಮ್ ಅಭಿನಯ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇನ್ನು ಶಿವನ ಗಣವಾಗಿ ಭೂಮಿಗೆ ಬರುವ ಅಕ್ಷಯ್ ಕುಮಾರ್ ಆಗಾಗ ಪ್ರತ್ಯಕ್ಷವಾಗಿ ಮಾರ್ಗದರ್ಶನ ನೀಡುತ್ತಾರೆ ಅಷ್ಟೇ. ಇದನ್ನು ನೋಡಿದಾಗ ಚಿತ್ರದ ಕಥೆಗೂ, ಟೈಟಲ್‌ಗೂ ಏನು ಸಂಬಂಧ ಅಂತನಿಸಿದರೂ ಅನುಮಾನವಿಲ್ಲ.