ವಿಜಯಪುರ: ಕಲಬೆರಕೆ ತುಪ್ಪ ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 30 ಕೆ.ಜಿ ತುಪ್ಪ ವಶಕ್ಕೆ ಪಡೆದಿದ್ದಾರೆ. ನಗರದ ಸಾಯಿ ಪಾರ್ಕ್ನ ಪ್ರಾರ್ಥನಾ ಶಾಲೆಯ ಪಕ್ಕದಲ್ಲಿರುವ ಶ್ರೀ ಬಾಲಾಜಿ ಹಾಲಿನ ಡೈರಿ ಎಂಬ ಮಳಿಗೆ ಮೇಲೆ ಈ ದಾಳಿ ನಡೆದಿದೆ.
ಈ ಮಳಿಗೆಯಲ್ಲಿ ಕಲಬೆರಕೆ ತುಪ್ಪ ಮಾರಾಟ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಈ ಹಿನ್ನಲೆಯಲ್ಲಿ ಕಳೆದ ಹಲವು ದಿನಗಳಿಂದ ಅಧಿಕಾರಿಗಳು ಮಳಿಗೆಯ ಮೇಲೆ ನಿಗಾ ಇಟ್ಟಿದ್ದರು. ಕಲಬೆರಕೆ ತುಪ್ಪ ಮಾರಾಟ ಮಾಡುತ್ತಿರುವುದು ಖಚಿತವಾಗುತ್ತಿದ್ದಂತೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.
ನಕಲಿ ತುಪ್ಪದ ಬಾಟಲ್, ಸ್ಟಿಕರ್ ಸೇರಿದಂತೆ ಪ್ಯಾಕಿಂಗ್ ಸಾಮಾಗ್ರಿ ಹಾಗೂ ಬಿಲ್ ಪುಸ್ತಕಗಳು ಲಭ್ಯವಾಗಿವೆ. ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾಗ ಅಂಗಡಿ ಮಾಲೀಕ ರವಿ ನಿಂಗನಗೌಡ ಬಿರಾದರ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಎಚ್ಚೆತ್ತ ಅಧಿಕಾರಿಗಳು ಕೂಡಲೇ ವಶಕ್ಕೆ ಪಡೆದುಕೊಂಡಿದ್ದಾರೆ.
ಬಿಲ್ ಪುಸ್ತಕದಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ವಿಳಾಸ ದಾಖಲಾಗಿದ್ದು, ಬೆಂಗಳೂರಿನಿಂದ ಖಾಸಗಿ ಬಸ್ ಮೂಲಕ ಟಿನ್ಗಳಲ್ಲಿ ಕಲಬೆರಕೆ ತುಪ್ಪ ತರಿಸಲಾಗುತ್ತಿತ್ತು. ವಶಪಡಿಸಿಕೊಂಡ ತುಪ್ಪ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.