ಶ್ರೀಕೃಷ್ಣ ಮಥುರೆಯನ್ನು ಪ್ರವೇಶಿಸುತ್ತಿದ್ದಂತೆ ಒಬ್ಬ ಅಗಸರವನು ಕಂಸನ ಬಟ್ಟೆಗಳನ್ನು ಒಂದು ಆನೆಯ ಮೇಲೆ ಕುಳಿತು ಬಹಳ ವೈಭವದಿಂದ ತೆಗೆದುಕೊಂಡು ಬರುತ್ತಿದ್ದ. ‘ಬಲರಾಮನಿಗೆ ಉತ್ತಮವಾದ ವಸ್ತ್ರಗಳಿವೆ. ಆದರೆ ಗೋಪಾಲಕರು ಹರಿದ, ಕೊಳೆಯಾದ ವಸ್ತ್ರ ಉಟ್ಟಿದ್ದಾರೆ. ಅವರಿಗೆ ಬಟ್ಟೆಗಳನ್ನು ಕೊಡು’ ಎಂದು ಅಗಸನಿಗೆ ಶ್ರೀಕೃಷ್ಣ ಹೇಳಿದ. ಅದಕ್ಕೆ ಅಗಸ ‘ನಿಮಗೆ ಈ ಬಟ್ಟೆಯೇ ಸಾಕು. ಅಡವಿ ಯಲ್ಲಿರುವ ನೀವು ಬೆಲೆ ಬಾಳುವ ರೇಷ್ಮೆವಸ್ತ್ರಗಳನ್ನು ಕನಸಿನಲ್ಲಿಯೂ ಬಯಸಬಾರದು’ ಎಂದು ಗದರಿದ.
ಶ್ರೀಕೃಷ್ಣನಿಗೆ ಇವನ ಬಗ್ಗೆ ಎಲ್ಲವೂ ತಿಳಿದಿತ್ತು. ಪಾರ್ವತಿಯ ವರದಿಂದ ಅವಧ್ಯತ್ವವರವನ್ನು ಪಡೆದ ದೊಡ್ಡ ದೈತ್ಯ ಇವನಾಗಿದ್ದ. ಅವನನ್ನು ಕೆಳಗೆ ಎಳೆದು ಅವನ ರುಂಡವನ್ನು ಕೃಷ್ಣ ಕತ್ತರಿಸಿ ಹಾಕಿದ್ದಾನೆ. ಅವನ ಬಳಿ ಇದ್ದ ವಸ್ತ್ರಗಳನ್ನು ತಾನು ಉಟ್ಟು ಗೋಪಾಲಕರಿಗೂ ಕೊಟ್ಟಿದ್ದಾನೆ. ಕಂಸನ ಐಶ್ವರ್ಯ ಇನ್ನು ಕೆಲವೇ ಕ್ಷಣಗಳಲ್ಲಿ ಬೀದಿಪಾಲಾಗುತ್ತದೆ ಎನ್ನುವು ದನ್ನು ಶ್ರೀಕೃಷ್ಣ ಈ ಮೂಲಕ ಸೂಚನೆ ನೀಡಿದ್ದಾನೆ. ದೇವರಿಗೆ ನಾವು ನಿತ್ಯದಲ್ಲಿ ಭಕ್ತಿಯಿಂದ ವಸ್ತ್ರ ಸಮರ್ಪಣೆ ಮಾಡಬೇಕು. ‘ಸಿದ್ಧಮೇವಾನ್ನವಸ್ತ್ರಾದ್ಯಂ ವಿಷ್ಣೋ ಸ್ವಾತಂತ್ರ್ಯತಸ್ತಥಾ| ಸ್ವಾರ್ಥಂ ಸಮರ್ಪಯೇತ್ ವಿಷ್ಣುಂ ಯಥಾ ಪ್ರಾಣೇ ಸುರಾಃ ಪುರಾ|| - ಅನ್ನ ವಸ್ತ್ರ ನೀರು ಎಲ್ಲವೂ ಭಗವಂತನದೇ.
ರೇಷ್ಮೆಯ ಹುಳಗಳ ಸೃಷ್ಟಿಯೂ ಅವನದೇ. ಯಾವ ಹುಳಗಳಲ್ಲಿಯೂ ಇಲ್ಲದೇ ಇರುವ ರಸವನ್ನು ರೇಷ್ಮೆಹುಳಗಳಲ್ಲಿ ಇಟ್ಟಿದ್ದಾನೆ. ಆ ರಸದಾರವಾಗಿ ರೇಷ್ಮೆವಸ್ತ್ರವಾಗುತ್ತದೆ. ಒಂದು ಹುಳಕ್ಕೆ ಪರಮಾತ್ಮ ಆ ಶಕ್ತಿಯನ್ನು ಕೊಟ್ಟಿದ್ದಾನೆ! ಹೀಗೆ ಉಡುವ ವಸ್ತ್ರಗಳೆಲ್ಲ ಅವನದೇ ಎಂದು ತಿಳಿದು ನಾವು ಸಮರ್ಪಣೆ ಮಾಡಬೇಕು. ನಾವು ಅಂಗಡಿಯಿಂದ ತಂದ ವಸ್ತ್ರವನ್ನು ದೇವರ ಎದುರಿಗೆ ಇಟ್ಟು ದೇವರಿಗೆ ಸಮರ್ಪಣೆ ಮಾಡಿಯೇ ಉಡಬೇಕು. ಪ್ರತಿನಿತ್ಯ ಅನ್ನ-ವಸ್ತ್ರಾದಿಗಳಿಂದ ನಮ್ಮನ್ನು ಪೋಷಣೆ ಮಾಡುವವನು ನೀನು ಎಂದು ದೇವರಲ್ಲಿ ಸಮರ್ಪಿಸಬೇಕು. ಹೀಗೆ ಮಾಡದೇ ಇದ್ದರೆ ಅಗಸನಿಗೆ ಆದ ಅವಸ್ಥೆ ಆಗುತ್ತದೆ ಎಂದು ಶ್ರೀಕೃಷ್ಣ ಈ ಕಥೆಯ ಮೂಲಕ ತಿಳಿಸುತ್ತಿದ್ದಾನೆ.