ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಕಳೆದ ಶೈಕ್ಷಣಿಕ ಸಾಲಿನ ಬೋಧನಾ ಶುಲ್ಕದಲ್ಲಿ (ಟ್ಯೂಷನ್ ಫೀ) ಶೇ.30 ಕಡಿತಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಸುಪ್ರೀಂಕೋರ್ಟ್ ತೀರ್ಪಿನ ಅನುಸಾರ 2020-21ನೇ ಶೈಕ್ಷಣಿಕ ವರ್ಷಕ್ಕೆ ಶೇ.15 ಶುಲ್ಕ ರಿಯಾಯಿತಿ ನೀಡುವಂತೆ ಖಾಸಗಿ ಶಾಲೆಗಳಿಗೆ ಆದೇಶಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ಶುಲ್ಕ ಕಡಿತಗೊಳಿಸಿ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕ್ಯಾಮ್್ಸ ಹಾಗೂ ಇತರ ಖಾಸಗಿ ಶಿಕ್ಷಣ ಸಂಸ್ಥೆಗಳು ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ ಗುರುವಾರ ಪ್ರಕಟಿಸಿದ್ದು, ಸರ್ಕಾರದ ಆದೇಶ ರದ್ದುಪಡಿಸಿದೆ. ಜತೆಗೆ, 2019-20ನೇ ಸಾಲಿನಲ್ಲಿ ಎಷ್ಟು ಶುಲ್ಕ ಸಂಗ್ರಹಿಸಲಾಗಿತ್ತೋ ಆ ಮೊತ್ತದಲ್ಲಿ ಶೇ.15 ವಿನಾಯಿತಿ ನೀಡಿ 2020-21ನೇ ಸಾಲಿನ ಶುಲ್ಕ ಸಂಗ್ರಹಿಸಲು ಖಾಸಗಿ ಶಾಲೆಗಳಿಗೆ ಅವಕಾಶ ಕಲ್ಪಿಸಿ, ಅರ್ಜಿಗಳನ್ನು ಇತ್ಯರ್ಥಪಡಿಸಿದೆ.
ಖಾಸಗಿ ಶಾಲೆಗಳ ವಾದವೇನಾಗಿತ್ತು?: ಕಳೆದ ಸಾಲಿನಲ್ಲಿ ಖಾಸಗಿ ಶಾಲೆಗಳ ಬೋಧನಾ ಶುಲ್ಕವನ್ನು ಶೇ.30 ಕಡಿತಗೊಳಿಸಿ ಸರ್ಕಾರ 2021ರ ಜ.29ರಂದು ಆದೇಶಿಸಿತ್ತು. ಜತೆಗೆ, ಶೇ.70 ಬೋಧನಾ ಶುಲ್ಕ ಹೊರತುಪಡಿಸಿ ಬೇರೆ ಯಾವುದೇ ಶುಲ್ಕ ಪಡೆಯುವಂತಿಲ್ಲ ಎಂದು ಆದೇಶದಲ್ಲಿ ಸೂಚಿಸಿತ್ತು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದ ಅರ್ಜಿದಾರರು, ಶುಲ್ಕ ಕಡಿತಗೊಳಿಸಿದ ಆದೇಶ ಶಿಕ್ಷಣ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದ್ದರು.
ಸುಪ್ರೀಂ ತೀರ್ಪು ಆಧರಿಸಿ ಆದೇಶ: ಇಂಡಿಯನ್ ಸ್ಕೂಲ್ ಆಫ್ ಜೋಧಪುರ ಹಾಗೂ ರಾಜಸ್ಥಾನ ಸರ್ಕಾರದ ನಡುವಿನ ಪ್ರಕರಣದಲ್ಲಿ 2021ರ ಮೇ 3ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, 2020-21ನೇ ಸಾಲಿನ ಶುಲ್ಕದಲ್ಲಿ ಶೇ.15 ರಿಯಾಯಿತಿ ನೀಡಿ, ಬಾಕಿ ಶುಲ್ಕ ಸಂಗ್ರಹಿಸಲು ಖಾಸಗಿ ಶಾಲೆಗಳಿಗೆ ಅವಕಾಶ ಕಲ್ಪಿಸಿತ್ತು. ಜತೆಗೆ, ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ಆನ್ಲೈನ್ ಅಥವಾ ಭೌತಿಕ ತರಗತಿಗಳಲ್ಲಿ ಭಾಗವಹಿಸದಂತೆ ನಿರ್ಬಂಧಿ ಸಬಾರದು ಹಾಗೂ ಅವರ ಪರೀಕ್ಷಾ ಫಲಿತಾಂಶ ಗಳನ್ನು ತಡೆಹಿಡಿಯಬಾರದು. ಯಾವುದೇ ವಿದ್ಯಾರ್ಥಿ ಅಥವಾ ಪಾಲಕರು ಶುಲ್ಕ ಪಾವತಿಸಲು ಕಷ್ಟವಾಗುತ್ತಿರುವ ಬಗ್ಗೆ ಮನವಿ ಸಲ್ಲಿಸಿದರೆ ಅವುಗಳನ್ನು ಪ್ರತ್ಯೇಕವಾಗಿ ಅನುಕಂಪದ ಆಧಾರದಲ್ಲಿ ಪರಿಗಣಿಸಿ ನಿರ್ಧಾರ ಕೈಗೊಳ್ಳ ಬೇಕು ಎಂದು ಖಾಸಗಿ ಶಾಲೆಗಳಿಗೆ ಸೂಚಿಸಿತ್ತು.ಇದೇ ತೀರ್ಪು ಆಧರಿಸಿ ಆದೇಶ ನೀಡಿರುವ ಹೈಕೋರ್ಟ್, 2020- 21ನೇ ಸಾಲಿಗೆ ರಾಜ್ಯದ ಖಾಸಗಿ ಶಾಲೆಗಳ ಬೋಧನಾ ಶುಲ್ಕದಲ್ಲಿ ಶೇ.15 ವಿನಾಯಿತಿ ನೀಡಿದೆ. ಜತೆಗೆ, ಖಾಸಗಿ ಶಾಲೆಗಳ ಶುಲ್ಕ ನಿಗದಿ ಪಡಿಸಲು ಸರ್ಕಾರಕ್ಕೆ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟು 2021ರ ಜ.29ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ರದ್ದುಪಡಿಸಿದೆ.