Air India Crash : ಜೂನ್ 12 ರಂದು ಗುಜರಾತಿನ ಅಹಮದಾಬಾದ್ನಿಂದ ಲಂಡನ್ಗೆ ಹೊರಟ ಏರ್ ಇಂಡಿಯಾ ಡ್ರೀಮ್‌ಲೈನರ್ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯಲ್ಲೇ ಪತನವಾಯಿತು. ಈ ದುರಂತದ ಹಿಂದೆ ವಿಮಾನದಲ್ಲಿ ಇದ್ದ ಇಬ್ಬರು ಪೈಲಟ್‌ಗಳಲ್ಲಿ ಒಬ್ಬರು ಉದ್ದೇಶಪೂರ್ವಕವಾಗಿ ಇಂಧನ ಸ್ವಿಚ್‌ಗಳನ್ನು ರನ್‌ನಿಂದ ಕಟ್‌ಆಫ್‌ಗೆ ಬದಲಾಯಿಸಿದ್ದು, ಇದರ ಪರಿಣಾಮ ಇಂಜಿನ್‌ಗಳಿಗೆ ಇಂಧನ ಕೊರತೆ ಉಂಟಾಗಿ ಅಪಘಾತವಾಗಿದೆ ಎಂದು ಕೆಲ ವಿದೇಶಿ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸುತ್ತಿವೆ. ಈ ಸುದ್ದಿಗಳನ್ನು ಟೀಕಿಸುತ್ತಿರುವ ವಿಮಾನಯಾನ ತಜ್ಞರು ಇಲ್ಲಿನ ಲೆಕ್ಕಾಚಾರ ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂದು ಹೇಳಿದ್ದಾರೆ.
ಅಂದಹಾಗೆ, 241 ಪ್ರಯಾಣಿಕರು ಸೇರಿ 260 ಮಂದಿ ಸಾವಿಗೆ ಕಾರಣವಾದ ಏರ್ ಇಂಡಿಯಾ ವಿಮಾನ ಅಪಘಾತದ ಬಗ್ಗೆ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನಿಖೆ ನಡೆಸುತ್ತಿದೆ. ಕಳೆದ ವಾರವಷ್ಟೇ ಅಪಘಾತದ ಕುರಿತು ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿತು. ಇದರಲ್ಲಿ ಹೊರಹೊಮ್ಮಿದ ಪ್ರಮುಖ ಅಂಶವೆಂದರೆ ವಿಮಾನದ ಎರಡೂ ಇಂಧನ ಸ್ವಿಚ್‌ಗಳು ಕೇವಲ ಒಂದು ಸೆಕೆಂಡಿನ ಅಂತರದಲ್ಲಿ ಚಲಿಸಿವೆ ಎಂಬುದು.
ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳಲ್ಲಿ ಒಬ್ಬರು ಬೇಕಂತಲೇ ವಿಮಾನ ಪತನ ಮಾಡಿದ್ದಾರೆ ಎಂದು ಕೆಲವು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಇದನ್ನು ವಾಯುಯಾನ ತಜ್ಞ ಕ್ಯಾಪ್ಟನ್ ಎಶಾನ್ ಖಾಲಿದ್ ಅವರು ಬಲವಾಗಿ ವಿರೋಧಿಸಿದ್ದಾರೆ.
ಎಎಐಬಿ ವರದಿಯ ಪ್ರಕಾರ, ವಿಮಾನವು ಸುಮಾರು 08:08:42 UTC ( ಸಂಯೋಜಿತ ಸಾರ್ವತ್ರಿಕ ಸಮಯ ) ಕ್ಕೆ 180 ನಾಟ್‌ಗಳ ಗರಿಷ್ಠ ವಾಯುವೇಗವನ್ನು ಸಾಧಿಸಿತು. ಇದಾದ ನಂತರ ಇಂಜಿನ್ 1 ಮತ್ತು 2 ಗಾಗಿ ಇಂಧನ ಕಟ್‌ಆಫ್ ಸ್ವಿಚ್‌ಗಳು ಕೇವಲ 1 ಸೆಕೆಂಡ್ ಸಮಯದ ಅಂತರದೊಂದಿಗೆ ಒಂದರ ನಂತರ ಒಂದರಂತೆ ರನ್‌ನಿಂದ ಕಟ್‌ಆಫ್ ಸ್ಥಾನಕ್ಕೆ ಪರಿವರ್ತನೆಗೊಂಡಿವೆ. ಇಂಜಿನ್ 1 ಇಂಧನ ಸ್ವಿಚ್ ಅನ್ನು ಕಟ್‌ಆಫ್‌ನಿಂದ ರನ್‌ಗೆ 08:08:52 UTC ಕ್ಕೆ ಮತ್ತು ಇಂಜಿನ್ 2 ಅನ್ನು 08:08:56 ಕ್ಕೆ ಸ್ಥಳಾಂತರಿಸಲಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ವಿಮಾನದಲ್ಲಿದ್ದ ಓರ್ವ ಪೈಲಟ್, ಇನ್ನೊಬ್ಬ ಪೈಲಟ್‌ಗೆ ನೀವು ಎಂಜಿನ್‌ಗೆ ಇಂಧನವನ್ನು ಏಕೆ ಕಡಿತಗೊಳಿಸಿದ್ದೀರಿ? ಎಂದು ಪ್ರಶ್ನಿಸಿದಾಗ ಇನ್ನೊಬ್ಬ ಪೈಲಟ್ ನಾನು ಹಾಗೆ ಮಾಡಲಿಲ್ಲ ಎಂದು ಹೇಳಿರುವುದು ವಿಮಾನದ ಧ್ವನಿ ರೆಕಾರ್ಡ್ನಲ್ಲಿ ದಾಖಲಾಗಿದೆ ಎಂದು ವರದಿ ಹೇಳಿದೆ.
ಈ ವಿಚಾರವಾಗಿ ಶನಿವಾರ ಎನ್ಡಿಟಿವಿ ಜೊತೆ ಮಾತನಾಡಿದ ವಾಯುಯಾನ ತಜ್ಞ ಕ್ಯಾಪ್ಟನ್ ಎಶಾನ್ ಖಾಲಿದ್, ವಿಮಾನ ದುರಂತದ ಸುತ್ತಲೂ ಹರಿದಾಡುತ್ತಿರುವ ಕಥೆಗಳನ್ನು ಸುಳ್ಳು ಮಾಡುವಂತಹ ಗಣಿತದ ಹೊಸ ಲೆಕ್ಕಾಚಾರವನ್ನು ನಾನು ನೀಡಲು ಬಯಸುತ್ತೇನೆ ಎಂದರು. ವರದಿಯ ಪ್ರಕಾರ, ಕೇವಲ 42 ಸೆಕೆಂಡುಗಳ ಟೈಮ್‌ಸ್ಟ್ಯಾಂಪ್‌ನಲ್ಲಿ, ಇಂಧನ ಸ್ವಿಚ್‌ಗಳು ರನ್‌ನಿಂದ ಕಟ್-ಆಫ್‌ಗೆ ಕೇವಲ ಒಂದು ಸೆಕೆಂಡ್‌ನೊಳಗೆ ಪರಿವರ್ತನೆಗೊಂಡಿವೆ. ಅಂದರೆ, ಒಂದು ಸೆಕೆಂಡ್‌ನೊಳಗೆ ಯಾರೋ ಕಾಕ್‌ಪಿಟ್‌ನಲ್ಲಿ ಅತ್ಯಂತ ವೇಗದ ಬೆರಳುಗಳು, ಎರಡೂ ಸ್ವಿಚ್‌ಗಳನ್ನು ಕೇವಲ 500 ಮಿಲಿಸೆಕೆಂಡ್‌ಗಳಲ್ಲಿ ಸರಿಸಿದ್ದಾರೆ.
ಇದಾದ ನಂತರ ಇನ್ನೊಬ್ಬ ಪೈಲಟ್ ಇದನ್ನು ನೋಡಿ, ನೀವು ಇಂಜಿನ್ ಇಂಧನವನ್ನು ಏಕೆ ಸ್ವಿಚ್ ಆಫ್ ಮಾಡಿದ್ದೀರಿ ಅಥವಾ ಕಡಿತಗೊಳಿಸಿದ್ದೀರಿ? ಎಂದು ಕೇಳಿದರು ಎಂಬುದು ವರದಿಯಲ್ಲಿರುವ ನಿರೂಪಣೆ. ಇದು ಸತ್ಯವೇ ಆಗಿದ್ದರೆ, ಈ ಕಥೆಯವನ್ನು ಪ್ರಸ್ತಾಪಿಸಿರುವ ವ್ಯಕ್ತಿ ಇದಕ್ಕೆ ಉತ್ತರಿಸಲೇಬೇಕು. ಅದೇನೆಂದರೆ, ವಿಮಾನದಲ್ಲಿದ್ದ ವ್ಯಕ್ತಿ, ಈ ಸ್ವಿಚ್ ಅನ್ನು ರಿವರ್ಸ್ ಮಾಡಲು 10 ಸೆಕೆಂಡುಗಳ ಕಾಲ ಏಕೆ ಕಾಯುತ್ತಿದ್ದನು? ಪಾಶ್ಚಿಮಾತ್ಯ ಮಾಧ್ಯಮ ವರದಿಗಳು ಸಹ, ಇಬ್ಬರೂ ಪೈಲಟ್‌ಗಳು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆಂದು ವಾದಿಸಿಲ್ಲ ಎಂದರು.
ಒಬ್ಬ ಪೈಲಟ್ ಸಾಯಲು ಪ್ರಯತ್ನಿಸಿದರೆ, ಅದೇ ವೇಳೆ ಇನ್ನೊಬ್ಬ ಪೈಲಟ್ ಬದುಕಲು ಪ್ರಯತ್ನಿಸುತ್ತಿದ್ದ ಎಂದು ನಾವು ಭಾವಿಸೋಣ. ಆಗ ಅವನು ಮೊದಲನೆಯವನಷ್ಟೇ ವೇಗವಾಗಿ ಇರಬೇಕೆಂದು ನಾನು ಭಾವಿಸುತ್ತೇನೆ. ಆದರೆ, ಅವನು ಸಮಯಸ್ಟ್ಯಾಂಪ್ನ 52 ಸೆಕೆಂಡುಗಳಲ್ಲಿ ಒಂದು ಇಂಧನ ಸ್ವಿಚ್ ಅನ್ನು ಮತ್ತು ಇನ್ನೊಂದನ್ನು 56 ಸೆಕೆಂಡ್ನಲ್ಲಿ ಸರಿಸಿದ್ದಾನೆ. ಆದ್ದರಿಂದ, ವಿಮಾನದಲ್ಲಿನ ಸ್ವಿಚ್‌ಗಳನ್ನು ಕಟ್ ಆಫ್ನಿಂದ ರನ್‌ಗೆ ಸರಿಸುವಲ್ಲಿ ನಾಲ್ಕು ಸೆಕೆಂಡುಗಳ ಅಂತರವಿದೆ. ಆ ರೀತಿ ಮಾಡದಿದ್ದರೆ ನಾವಿಬ್ಬರೂ ಸಾಯುತ್ತೇವೆ ಎಂದು ಅವರಿಬ್ಬರು ತಿಳಿದಿರುತ್ತಾರೆ. ಇದು ಕೂಡ ಮಿಲಿಸೆಕೆಂಡುಗಳಲ್ಲಿ ಆಗಬೇಕಿತ್ತಲ್ಲವೇ? ಆದರೆ, ಅದನ್ನು ಮಾಡಲು 4 ಸೆಕೆಂಡ್ ತೆಗೆದುಕೊಂಡಿದೆ ಎನ್ನುವ ಮೂಲಕ ಖಾಲಿದ್ ತಮ್ಮದೇಯಾದ ವಾದದ ಮೂಲಕ ಗಮನಸೆಳೆದರು.
ಮತ್ತಷ್ಟು ವಿವರಣೆ ನೀಡಿದ ಖಾಲಿದ್, ಅಪಘಾತದ ಸಮಯದಲ್ಲಿ ವಿದ್ಯುತ್ ಸಿಗ್ನಲ್ಗಳು ಇಂಧನವನ್ನು ಆಫ್ ಮಾಡಿದ್ದು, ಸ್ವಿಚ್‌ಗಳು ಆ ಸಂದರ್ಭದಲ್ಲಿ ಚಲಿಸಿಲ್ಲ ಎಂದು ಭಾವಿಸಿದ್ದಾರೆ. ಯಾವಾಗ, ಪೈಲಟ್‌ಗಳು ಅಪಘಾತವನ್ನು ತಪ್ಪಿಸಲು ಇಂಜಿನ್‌ಗಳನ್ನು ಮರುಪ್ರಾರಂಭಿಸಲು ಪ್ರಯತ್ನಿಸುತ್ತಿದ್ದಾಗ ಮಾತ್ರ ಇಂಧನ ಸ್ವಿಚ್‌ಗಳನ್ನು ಸ್ಥಳಾಂತರಿಸಿರಬಹುದು ಆದರೆ, ಪತನವನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿತು. ಜೂನ್ 12ರಂದು ಅಹಮದಾಬಾದ್ನ ಸರ್ದಾರ್ ವಲ್ಲಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ನ ಗಾಟ್ವಿಕ್ಗೆ ಮಧ್ಯಾಹ್ನ 1.39ಕ್ಕೆ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾದರು. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವಿಗೀಡಾದರು. (ಏಜೆನ್ಸೀಸ್)