ನ್ಯೂಸ್

ಬರ್ತಡೇ ಪಾರ್ಟಿಯಲ್ಲಿ ಬಾರ್​ ಡ್ಯಾನ್ಸರ್ ಜೊತೆ ಅಶ್ಲೀಲ ನೃತ್ಯ; ಎಎಸ್​ಐ ವಿಡಿಯೋ ವೈರಲ್; ಅಮಾನತು| Suspended

Suspended: ಜನರಿಗೆ ಮಾದರಿಯಾಗಬೇಕಿದ್ದ ಪೊಲೀಸ್ ಅಧಿಕಾರಿಯೊಬ್ಬ ಬರ್ತಡೇ ಪಾರ್ಟಿಯೊಂದರಲ್ಲಿ ಬಾರ್ ಡ್ಯಾನ್ಸರ್ ಜೊತೆ ಅಶ್ಲೀಲವಾದ ಡ್ಯಾನ್ಸ್​ ಮಾಡಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಸಾರ್ವಜನಿಕವಾಗಿ ಅಶ್ಲೀಲ ಡ್ಯಾನ್ಸ್ ಮಾಡಿದ ಹಿನ್ನೆಲೆ ಸೋಮವಾರ (ಸೆ. 08) ಎಎಸ್​ಐ ಅನ್ನು ಅಮಾನತು ಮಾಡಲಾಗಿದೆ.

ಮಧ್ಯಪ್ರದೇಶದ ಡಾಟಿಯಾ ಜಿಲ್ಲೆಯ ಸಿವಿಲ್ ಲೈನ್ಸ್​ ಪೊಲೀಸ್ ಠಾಣೆಯಲ್ಲಿ ಎಎಸ್​ಐ ಆಗಿ ಕೆಲಸ ಮಾಡುತ್ತಿರುವ ಸಂಜೀವ್ ಗೌರ್ ಅಮಾನತು ಆದವರು. ಸೆಪ್ಟೆಂಬರ್ 2 ರಂದು, ತಮ್ಮ ಠಾಣೆಯಲ್ಲಿ ಕೆಲಸ ಮಾಡುವ ಕಾನ್‌ಸ್ಟೆಬಲ್ ರಾಹುಲ್ ಬೌದ್ ಅವರ ಹುಟ್ಟುಹಬ್ಬದ ಪಾರ್ಟಿಯನ್ನು ಹೋಟೆಲ್‌ನಲ್ಲಿ ನಡೆಸಲಾಗಿತ್ತು ಎನ್ನಲಾಗಿದೆ.

ಎಎಸ್​ಐ ಸಂಜೀವ್ ಈ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ರಾಹುಲ್ ಈ ಕಾರ್ಯಕ್ರಮಕ್ಕಾಗಿ ಇಬ್ಬರು ಬಾರ್ ಡ್ಯಾನ್ಸರ್‌ಗಳನ್ನು ಕರೆದಿದ್ದರು. ಅವರು ನೃತ್ಯ ಮಾಡಿ ಪಾರ್ಟಿಗೆ ಹೋದವರನ್ನು ರಂಜಿಸುತ್ತಿದ್ದರು. ಈ ವೇಳೆ ಸಂಜೀವ್ ಮದ್ಯದ ಪ್ರಭಾವದಿಂದ ಉದ್ರೇಕಗೊಂಡು ಬಾರ್ ಡ್ಯಾನ್ಸರ್‌ನೊಂದಿಗೆ ಅಶ್ಲೀಲ ನೃತ್ಯಗಳನ್ನು ಮಾಡಿದ್ದಾರೆ. ಅಲ್ಲಿದ್ದ ವ್ಯಕ್ತಿಯೊಬ್ಬರು ಇದನ್ನು ಚಿತ್ರೀಕರಿಸಿದ್ದು, ಆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವೈರಲ್ ಆದ ವಿಡಿಯೋ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಸಾರ್ವಜನಿಕವಾಗಿ ಅನುಚಿತ ವರ್ತನೆ ತೋರಿದ ಹಿನ್ನೆಲೆ ಎಎಸ್​ಐ ಸಂಜೀವ್ ಮತ್ತು ಕಾನ್ಸ್​ಟೇಬಲ್ ರಾಹುಲ್ ಅವರನ್ನು ಅಮಾನತು ಮಾಡಲಾಗಿದೆ. ಘಟನೆಯ ತನಿಖೆಗೂ ಆದೇಶಿಸಲಾಗಿದೆ.

ಈ ಕುರಿತು ಮಾತನಾಡಿರುವ ಜಿಲ್ಲಾ ಎಸ್ಪಿ ಸೂರಜ್ ವರ್ಮಾ, ಪೊಲೀಸ್ ಇಲಾಖೆಯಲ್ಲಿ ಇಂತಹ ನಡವಳಿಕೆಯನ್ನು ನಾವು ಸಹಿಸುವುದಿಲ್ಲ. ಕೆಲವೇ ಜನರ ತಪ್ಪುಗಳಿಂದ ಇಡೀ ಇಲಾಖೆಯ ಖ್ಯಾತಿಗೆ ಹಾನಿಯಾಗುತ್ತದೆ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)