| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು ಸೇರಿ ಎಲ್ಲ ಹಂತದ ಜನಪ್ರತಿನಿಧಿಗಳು ಸರ್ಕಾರಿ ಯೋಜನೆಗಳಲ್ಲಿ ತಮ್ಮ ಫೋಟೋ ಬಳಕೆ ಮಾಡುವುದಕ್ಕೆ ಬ್ರೇಕ್ ಬಿದ್ದಿರುವುದಕ್ಕೆ ಅಕ್ಷರಶಃ ಕೈಕೈ ಹಿಸುಕಿಕೊಳ್ಳುತ್ತಿದ್ದು ಕಸಿವಿಸಿಗೊಂಡಿದ್ದಾರೆ. ಮೂರು ಪಕ್ಷಗಳ ಶಾಸಕರು, ವಿಧಾನಪರಿಷತ್ ಸದಸ್ಯರನ್ನು ಈ ವಿಚಾರದಲ್ಲಿ ಮಾತಿಗೆಳೆದಾಗ ತಮ್ಮ ಮೂಗಿನ ನೇರಕ್ಕೆ ಅಭಿಪ್ರಾಯ ವ್ಯಕ್ತಪಡಿಸಿದರು. ಕೆಲವು ಇದು ಕೋರ್ಟ್ ವಿಚಾರ ಎಂದು ಆಫ್ದಿ ರೆಕಾರ್ಡ್ ಅಭಿಪ್ರಾಯ ದಾಖಲಿಸಿದರು.
ಅಂದಹಾಗೆ ನಾಡಿನ ಯಾವುದೇ ಮೂಲೆಗೆ ಹೋದರು ಅಲ್ಲಿನ ಬಸ್ ನಿಲ್ದಾಣದಲ್ಲಿ ಶಾಸಕರು ಅಥವಾ ಸಂಸದರ ಫೋಟೋ ಎದ್ದು ಕಾಣಿಸುತ್ತದೆ. ಸ್ವತಃ ಅವರೇ ತಮ್ಮ ಕಿಸೆಯಿಂದ ಹಣಕೊಟ್ಟು ನಿರ್ವಿುಸಿದ್ದು ಎಂಬಂತೆ ಗಮನ ಸೆಳೆಯುತ್ತದೆ. ಹಾಗೆಯೇ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ತಾವೇ ಭಗೀರಥರು ಎಂಬಂತೆ ತಮ್ಮ ಫೋಟೋ ಹಾಕಿಕೊಂಡು ವೈಯಕ್ತಿಕ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಪಾರ್ಕ್, ಸಮುದಾಯ ಭವನಗಳಲ್ಲೂ ಅದೇ ಕತೆ. ಆದರೆ ಇನ್ನು ಮುಂದೆ ಇಂಥದಕ್ಕೆ ಅಧಿಕಾರಿಗಳು ಅವಕಾಶ ಕೊಡುವಂತಿಲ್ಲ. ಈಗ ಹಾಕಿರುವ ಫೋಟೋಗಳನ್ನು ಶೀಘ್ರವಾಗಿ ತೆಗೆಸಿ ಹಾಕಬೇಕು ಜತೆಗೆ ಇನ್ನು ಮುಂದೆ ಜನಪ್ರತಿನಿಧಿಗಳ ಫೋಟೋ ಬಳಕೆ ಮಾಡುವಂತಿಲ್ಲ.
ಈ ಕುರಿತಂತೆ ಶಾಸಕರೊಬ್ಬರನ್ನು ಮಾತಿಗೆಳೆದಾಗ, ತಮ್ಮ ಕ್ಷೇತ್ರದಲ್ಲಿ ಜನರಿಗೆ ತಮ್ಮ ಹೆಸರು, ಫೋಟೋ ನಿರಂತರವಾಗಿ ಕಾಣುತ್ತಿರಬೇಕು, ಕ್ಷೇತ್ರಕ್ಕೆ ತಾವೇನು ಮಾಡಿದ್ದೇವೆಂದು ಗೊತ್ತಾಗಬೇಕೆಂಬ ಕಾರಣಕ್ಕೆ ಈ ರೀತಿ ಫೋಟೋ ಬಳಕೆ ಮಾಡುವುದು ಸಾಮಾನ್ಯವಾಗಿದೆ. ಇದೊಂದು ರೀತಿ ಮುಜುಗರ, ಆದರೆ ರಾಜಕೀಯವಾಗಿ ಅನಿವಾರ್ಯವಾಗಿದೆ ಎಂದರು. ಎದುರಾಳಿಗಳು ನೀವೇನು ಮಾಡಿದ್ದೀರಿ ಎಂದು ಪ್ರಶ್ನಿಸಲು ಅವಕಾಶ ಇಲ್ಲದಂತೆ ನಮ್ಮ ಕೆಲಸ ದಾಖಲು ಮಾಡಲು ಇದ್ದ ಅವಕಾಶ ಎಂದರು.
ಇನ್ನೊಬ್ಬ ಶಾಸಕರು ಪ್ರತಿಕ್ರಿಯಿಸಿ, 1998ರ ಆಸುಪಾಸಿನಲ್ಲಿ ತಾವು ಸಂಸದರಾಗಿದ್ದಾಗ ಇದೆಲ್ಲ ಇರಲಿಲ್ಲ. ಕೇವಲ ಯಾವ ಅವಧಿಯಲ್ಲಿ ಅನುದಾನ ಬಿಡುಗಡೆಯಾಗಿದ್ದು ಎಂದು ಮಾತ್ರ ಫಲಕಗಳಲ್ಲಿ ನಮೂದಾಗುತ್ತಿತ್ತು, ಇತ್ತೀಚೆಗೆ ಫೋಟೋ ಬಳಕೆ, ಹೆಸರು ದೊಡ್ಡದಾಗಿ ಬಳಕೆಯಾಗುತ್ತಿದೆ. ಸ್ವಲ್ಪ ಹೆಚ್ಚೇ ಬಳಕೆ ಮಾಡಿಕೊಂಡೆವು. ಇದು ಪಕ್ಷಾತೀತವಾಗಿ ಆಗಿದೆ ಎಂದು ಅಭಿಪ್ರಾಯಪಟ್ಟರು. ಈಗ ಈ ಆದೇಶದ ಬಗ್ಗೆ ವಿಶ್ಲೇಷಣೆ ಮಾಡಿದರೆ ನ್ಯಾಯಾಂಗ ಉಲ್ಲಂಘನೆಯಾಗುತ್ತದೆ. ಈ ಕಾರಣಕ್ಕೆ ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಬಹುದು. ಈ ಬಗ್ಗೆ ಅವಕಾಶ ಸಿಕ್ಕರೆ ಶಾಸಕರು ಚರ್ಚೆ ಮಾಡುತ್ತೇವೆ ಎಂದು ಜನಪ್ರತಿನಿಧಿಯೊಬ್ಬರು ತಿಳಿಸಿದರು.
ವರ್ಷಗಳ ಪ್ರಯತ್ನ: ಜನರ ತೆರಿಗೆ ಹಣದಲ್ಲಿ ನಿರ್ವಿುಸಿದ ಸರ್ಕಾರಿ ಕಾಮಗಾರಿಗೆ ಶಾಸಕರ ಫೋಟೋ ಏಕೆ ಎಂಬ ಸಾರ್ವಜನಿಕ ಹಿತಾಸಕ್ತಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಸವೋಚ್ಚ ನ್ಯಾಯಾಲಯ 2015ರಲ್ಲಿ ನಿರ್ದೇಶನ ನೀಡಿತ್ತು. ಸರ್ಕಾರದ ಕಾಮಗಾರಿಗಳಲ್ಲಿ ಶಾಸಕರ ಫೋಟೋ, ಹೆಸರು ತೆಗೆಸಿ ಅನುಪಾಲನಾ ವರದಿ ನೀಡುವಂತೆ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿತ್ತು.
ನ್ಯಾಯಾಲಯ ಹೇಳಿದ್ದೇನು?: ತೆರಿಗೆ ಹಣದಿಂದ ಸರ್ಕಾರದ ಮೂಲಕ ನಿರ್ವಣವಾಗಿರುವ ಕಾಮಗಾರಿ, ಯೋಜನೆಗಳನ್ನು ಅನುಷ್ಟಾನಗೊಳಿಸುವಾಗ ಜನಪ್ರತಿನಿಧಿಗಳ ಹೆಸರು ಮತ್ತು ಫೋಟೋಗಳನ್ನು ಅನಾವರಣ ಗೊಳಿಸಿದ್ದಲ್ಲಿ ಅವುಗಳನ್ನು ತೆರವು ಗೊಳಿಸುವ ಬಗ್ಗೆ ಸಂಬಂಧಪಟ್ಟ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಿಗಳಿಗೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡ ಬೇಕೆಂದು ಕೋರ್ಟ್ ಆದೇಶಿಸಿತ್ತು.
ಅಧಿಕಾರಿಗಳಿಗೆ ಧರ್ಮಸಂಕಟ: ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಜಾಹೀರಾತು ಪ್ರದರ್ಶಿಸದಂತೆ ಕ್ರಮಕೈಗೊಳ್ಳಬೇಕು. ಒಂದು ವೇಳೆ ಇಂತಹ ಪ್ರಕರಣ ಮರುಕಳಿಸಿದಲ್ಲಿ ಕರ್ನಾಟಕ ಮುಕ್ತ ಸ್ಥಳಗಳ (ವಿರೂಪಗೊಳಿಸುವಿಕೆ ತಡೆ) ಕಾಯ್ದೆ 1981ರ ಅಡಿ ಸಂಬಂಧಪಟ್ಟವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ದಾಖಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದನ್ನು ಅನುಷ್ಠಾನಗೊಳಿಸಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆ ಹೊರಟಿದೆ. ಆದರೆ, ಶಾಸಕರ ಫೋಟೋ ತೆರವು ಹೇಗೆ ಎಂಬ ಆತಂಕ ಅಧಿಕಾರಿಗಳಿಗಿದೆ.
ಕಾಂಗ್ರೆಸ್ ವಾದ: ಪ್ರಧಾನಿ, ಮುಖ್ಯಮಂತ್ರಿ ಫೋಟೋ ಬಳಕೆ ಮಾಡಬಹುದು ಎಂಬ ಆದೇಶ ಸರಿಯಲ್ಲ. ಶಾಸಕರ ಫೋಟೋ ಬೇಡ ಎಂದಾದರೆ ಪ್ರಧಾನಿ, ಮುಖ್ಯಮಂತ್ರಿಯವರ ಫೋಟೋವೂ ಬೇಡ. ಫೋಟೋ ಬಳಸಲು ಅವಕಾಶ ನೀಡಿದರೆ ಅವರ ಪಕ್ಷಕ್ಕೆ ಅನುಕೂಲವಾಗಬಹುದು.
ಬಿಜೆಪಿ ವಾದ: ಮುಖ್ಯಮಂತ್ರಿಯಾಗಲಿ, ಪ್ರಧಾನಿ ಯಾಗಲಿ ಅವರು ಪಕ್ಷಕ್ಕೆ ಸೀಮಿತವಲ್ಲ. ಅವರು ನಾಡಿಗೆ, ರಾಷ್ಟ್ರಕ್ಕೆ ಮುಖ್ಯಸ್ಥರು. ಪಕ್ಷಾತೀತರಾಗಿರುತ್ತಾರೆ. ಅವರ ಫೋಟೋ ಬಳಕೆ ಮಾಡಬಾರದೆಂಬ ಅಭಿಪ್ರಾಯ ಸರಿಯಲ್ಲ.
ಸರ್ಕಾರಿ ಕಾಮಗಾರಿಗಳಲ್ಲಿ ಜನಪ್ರತಿನಿಧಿಗಳ ಪೋಟೋ ಬಳಕೆ ಮಾಡಬಾರದೆಂದು ನ್ಯಾಯಾಲಯ ಆದೇಶಿಸಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಪ್ರಧಾನಿ, ಮುಖ್ಯಮಂತ್ರಿ ಫೋಟೋ ಏಕೆ ಬೇಕು?
| ರಾಮಲಿಂಗಾ ರೆಡ್ಡಿ ಹಿರಿಯ ಶಾಸಕ
ಹಿಂದೆ ಈ ರೀತಿ ಬಳಕೆ ಇರಲಿಲ್ಲ. ಇತ್ತೀಚೆಗೆ ಹೆಚ್ಚಾಗಿದೆ. ಹಣ ಸರ್ಕಾರದ್ದು. ಶಾಸಕರಿಗೆ ಅನುದಾನ ಖರ್ಚು ಮಾಡಲು ವಿವೇಚನೆ ಕೊಟ್ಟಿರುತ್ತದೆ, ಮಾಲೀಕತ್ವ ಅಲ್ಲ. ಹೀಗಾಗಿ ಕೋರ್ಟ್ ತೀರ್ಪು ಸರಿ ಇದೆ.
| ಆಯನೂರು ಮಂಜುನಾಥ್ ವಿಧಾನಪರಿಷತ್ ಸದಸ್ಯ