ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಘಟಕದ ಉದ್ದೇಶವನ್ನು ಈಡೇರಿಸುವ ಜತೆಜತೆಗೆ ತನ್ನ ಅಭಿಲಾಷೆಯನ್ನೂ ಪೂರೈಸಿಕೊಂಡಿದೆ.
ತನಗೆ ಲಭ್ಯವಾಗುವ 2 ಸ್ಥಾನಗಳಲ್ಲಿ ಒಂದನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ಹಾಗೂ ಇನ್ನೊಂದನ್ನು ಹಿಂದುಳಿದ ವರ್ಗಕ್ಕೆ ನೀಡಬೇಕೆಂದು ಕೆಪಿಸಿಸಿ ನಿರ್ಧರಿಸಿತ್ತು. ಆ ಪ್ರಕಾರವೇ ಹೈಕಮಾಂಡ್ ತನ್ನ ತೀರ್ಮಾನ ಪ್ರಕಟಿಸಿದೆ. ಆದರೆ, ಹಿಂದುಳಿದ ವರ್ಗದ ಕೋಟಾದಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬ ರಾಜ್ಯ ಘಟಕದ ಶಿಫಾರಸನ್ನು ಸ್ಪಷ್ಟವಾಗಿ ಬದಿಗಿಟ್ಟು ತನ್ನ ನಿರ್ಧಾರ ಪ್ರಕಟಿಸಿದೆ. ಈ ಮೂಲಕ ಕೆಪಿಸಿಸಿಗೆ ಪೂರ್ತಿ ಬೇಸರವೂ ಆಗದಂತೆ, ತನ್ನ ಆಯ್ಕೆಯನ್ನೂ ಮಾಡಿಕೊಂಡು ಕೈತೊಳೆದುಕೊಂಡಿದೆ.
ರಾಜ್ಯಸಭೆ ಮಾಜಿ ಸದಸ್ಯ ಬಿ.ಕೆ.ಹರಿಪ್ರಸಾದ್ ಬಹುಕಾಲದಿಂದ ಹೈಕಮಾಂಡ್ ನಂಟು ಇಟ್ಟುಕೊಂಡಿದ್ದರು. ರಾಹುಲ್ ಗಾಂಧಿ ಅಧ್ಯಕ್ಷರಾಗಿದ್ದಾಗ ಅವರ ಆಪ್ತತೆ ಕೊಂಚ ತಗ್ಗಿದ್ದು ಬಿಟ್ಟರೆ ಹಿರಿಯರೊಂದಿಗಿನ ನಂಟು ಕಳೆದುಕೊಂಡಿರಲಿಲ್ಲ. ಈ ಆಯ್ಕೆ ಮೂಲಕ ಸಕ್ರಿಯ ರಾಜಕಾರಣದಲ್ಲಿ ಇನ್ನಷ್ಟು ದೀರ್ಘವಾಗಿ ಉಳಿಯುವಂತೆ ಮಾಡಿದೆ. ರಾಜ್ಯ ಘಟಕದ ಶಿಫಾರಸು ಇಲ್ಲದೆ, ಇಲ್ಲಿನವರ ಗಮನಕ್ಕೂ ಬಾರದಂತೆ ಬಿ.ಕೆ.ಹರಿಪ್ರಸಾದ್ ಆಯ್ಕೆ ನಡೆದಿರುವುದು, ಅವರ ಉನ್ನತ ಮಟ್ಟದ ಸಂಪರ್ಕ ಎಷ್ಟು ಕೆಲಸ ಮಾಡಿದೆ ಎಂಬುದನ್ನು ಎತ್ತಿ ತೋರಿದೆ.
ಸಿದ್ದು ಮಾತಿಗೆ ಬೆಲೆ: ನಸೀರ್ ಅಹ್ಮದ್ ವಿಚಾರಕ್ಕೆ ಬಂದರೆ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜತೆಗಿನ ಅಪ್ತತೆ ಕೆಲಸ ಮಾಡಿದೆ. ಹೈಕಮಾಂಡ್ ಮಟ್ಟದಲ್ಲೂ ಸಿದ್ದರಾಮಯ್ಯ ಮಾತಿಗೆ ಬೆಲೆ ಇದೆ ಎಂಬುದು ಈ ನಿರ್ಧಾರದಿಂದ ಬಹಿರಂಗವಾಗಿದೆ.
ಬಿಕೆಗೇಕೆ ಅವಕಾಶ?: 2 ಬಾರಿ ರಾಜ್ಯಸಭಾ ಸದಸ್ಯ, 13 ರಾಜ್ಯಗಳಲ್ಲಿ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿರುವ ಅನುಭವ ಹೊಂದಿರುವ ಬಿ.ಕೆ.ಹರಿಪ್ರಸಾದ್ ರಾಜ್ಯ ರಾಜಕಾರಣಕ್ಕೆ ಮರಳಿದ್ದಾರೆ. ಕಳೆದ ಸಂಸತ್ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸೋತಿದ್ದ ಅವರು, ಎಐಸಿಸಿ ಮಟ್ಟದಲ್ಲಿ ಹಲವು ಜವಾಬ್ದಾರಿ ನಿಭಾಯಿಸಿದ್ದಾರೆ. ಬಿಜೆಪಿ ವಿರುದ್ಧ ನೇರ ವಾಗ್ದಾಳಿ ನಡೆಸುವ ಚಾತುರ್ಯ, ಪಕ್ಷವನ್ನು ಸಮರ್ಥಿಸಿ ಕೊಳ್ಳುವ ಸಾಮರ್ಥ್ಯ, ಇಂದಿರಾ ಗಾಂಧಿ ಕುಟುಂಬದ ಜತೆಗಿನ ಬಾಂಧವ್ಯ, ಹೈಕಮಾಂಡ್ ಮೇಲಿನ ನಿಷ್ಠೆ, ಈಡಿಗ ಸಮುದಾಯಕ್ಕೆ ಪ್ರಾತಿನಿಧ್ಯ, ರಾಜ್ಯಸಭೆ ಟಿಕೆಟ್ ತಪ್ಪಿದ್ದಕ್ಕೆ ಪರ್ಯಾಯ ಅವಕಾಶ ಕಲ್ಪಿಸಲಾಗಿದೆ ಎಂಬ ಮಾತಿದೆ.
ಡಿಕೆಶಿ ಶಿಫಾರಸಿಗಿಲ್ಲ ಬೆಲೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಿಂದುಳಿದ ವರ್ಗಗಳ ಕೋಟಾದಲ್ಲಿ ಮಾಜಿ ಸಚಿವ ಎಂ.ಆರ್. ಸೀತಾರಾಂ ಅವರ ಹೆಸರು ಶಿಫಾರಸು ಮಾಡಿದ್ದರು. ಆದರೆ ಅದನ್ನು ಹೈಕಮಾಂಡ್ ಪರಿಗಣಿಸಿಲ್ಲ. ಇದು ಅವರಿಗೆ ಹಿನ್ನಡೆ ತಂದಿದೆ. ಅಸಮಾಧಾನ ಆರಂಭ: ಪರಿಷತ್ ಟಿಕೆಟ್ ಸಿಕ್ಕೇ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ, ಈಗ ಪಕ್ಷದಲ್ಲಿ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳಲು ಆಗದಂತಾಗಿದೆ ಎಂದು ಮಾಜಿ ಸಂಸದ ಮುದ್ದಹನುಮೇಗೌಡ ಪ್ರತಿಕ್ರಿಯಿಸಿದ್ದಾರೆ. ಇನ್ನೊಂದೆಡೆ ನಸೀರ್ ಅಹ್ಮದ್ಗೆ ಅವಕಾಶ ಕೊಟ್ಟಿರುವುದಕ್ಕೆ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅಸಮಾಧಾನಗೊಂಡಿದ್ದಾರೆ. ಕ್ರಿಶ್ಚಿಯನ್ ಸಮುದಾಯಕ್ಕೆ ಅವಕಾಶ ನೀಡದ್ದಕ್ಕೆ ಕರಾವಳಿ ಕೈ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಇಂದೇ ಕಡೇ ದಿನ: ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೇ ದಿನವಾಗಿದ್ದು, ವಿಧಾನಸಭೆ ಕಾರ್ಯದರ್ಶಿ ಕಚೇರಿಯಲ್ಲಿ ಪೊಲೀಸ್ ಬಂದೋಬಸ್ತ್ ಜತೆಗೆ ಕರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮುಖಂಡರ ಜತೆಗೆ ಬರಲಿರುವ ಕಾರಣ, ಪ್ರತಿಯೊಬ್ಬರನ್ನು ತಪಾಸಣೆ ಮಾಡಿ, ಸ್ಯಾನಿಟೈಸರ್ ಮಾಡಿಸಿದ ಬಳಿಕವೇ ಕಚೇರಿ ಪ್ರವೇಶಕ್ಕೆ ಅವಕಾಶ ನೀಡಲಾಗá-ತ್ತದೆ.
ಜೆಡಿಎಸ್ ಅಭ್ಯರ್ಥಿ ಇಂದು ಅಂತಿಮ: ಎಂಎಲ್ಸಿ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಗುರುವಾರ ಪ್ರಕಟಿಸಲಿದೆ. ಕೋಲಾರದ ಇಂಚರ ಗೋವಿಂದರಾಜು ಹೆಸರು ಬಹುತೇಕ ಅಂತಿಮವಾಗಿದ್ದು, ಕೊನೆಯ ಕ್ಷಣದಲ್ಲಿ ಅಭ್ಯರ್ಥಿಯ ಹೆಸರು ಪ್ರಕಟಗೊಳ್ಳುವ ಸಾಧ್ಯತೆಗಳಿವೆ. ಹೆಸರು ಪ್ರಕಟಿಸುವ ಮುನ್ನ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪರಿಷತ್ ಅವಕಾಶ ವಂಚಿತರು: ಪಕ್ಷ ಆರ್ಥಿಕವಾಗಿ ಸೊರಗಿದಾಗ ನೆರವಿಗೆ ನಿಂತ ಎಂ.ಆರ್.ಸೀತಾರಾಂ,ಹಿಂದುಳಿದ ವರ್ಗಗಳ ಮತ ಕ್ರೋಡೀಕರಣಕ್ಕೆ ಪ್ರಯತ್ನಿಸಿದ್ದ ಎಚ್.ಎಂ.ರೇವಣ್ಣ, ಚುನಾವಣೆಗಳಲ್ಲಿ ಟಿಕೆಟ್ ತಪ್ಪಿಸಿಕೊಳ್ಳುತ್ತಲೇ ಬಂದಿರುವ ಮಾರ್ಗರೇಟ್ ಆಳ್ವ ಪುತ್ರ ನಿವೇದಿತ್, ಮಧ್ಯಕರ್ನಾಟಕದಿಂದ ಪ್ರತಿನಿಧಿಸುವ ಆಪೇಕ್ಷೆ ಹೊಂದಿದ್ದ ಅಬ್ದುಲ್ ಜಬ್ಬಾರ್, ರಾಜ್ಯಸಭೆಗೆ ಪುನರಾಯ್ಕೆ ಬಯಸಿ ಅವಕಾಶ ಕಳೆದುಕೊಂಡಿದ್ದ ರಾಜೀವ್ ಗೌಡ, ಪಕ್ಷದ ಸಂಘಟನೆಯಲ್ಲಿ ತೆರೆಯ ಹಿಂದೆ ಕೆಲಸ ಮಾಡಿರುವ ಸೂರಜ್ ಹೆಗ್ಡೆ, ಕ್ರಿಶ್ಚಿಯನ್ ಕೋಟಾದಲ್ಲಿ ಅವಕಾಶ ಬಯಸಿದ್ದ ಐವಾನ್ ಡಿಸೋಜಾ, ನಿವೇದಿತ್ ಆಳ್ವ, ತುಮಕೂರು ಕ್ಷೇತ್ರ ದೇವೇಗೌಡರಿಗೆ ಬಿಟ್ಟುಕೊಟ್ಟಿದ್ದ ಮುದ್ದಹನುಮೇಗೌಡ.