ಗುನಾ: ಪೊಲೀಸರಿಂದ ಹಲ್ಲೆಗೊಳಗಾದ ದಲಿತ ದಂಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಇದೀಗ ಇನ್ನೊಂದು ಅಂಥದ್ದೇ ಘಟನೆ ವರದಿಯಾಗಿದೆ. ಇತರ ಹಿಂದುಳಿದ ವರ್ಗಕ್ಕೆ(ಒಬಿಸಿ)ಸೇರಿದ ಯುವಕನೋರ್ವನಿಗೆ ಜನರ ಗುಂಪೊಂದು ಅಮಾನುಷವಾಗಿ ಹೊಡೆದಿದೆ. ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲೇ ಈ ಘಟನೆಯೂ ನೀಡಿದೆ. ಯುವಕ ಅಂಗಡಿಯೊಂದರಿಂದ ಕೀಟನಾಶಕ ಕದಿಯುವಾಗ ಸಿಕ್ಕಿಬಿದ್ದಿದ್ದರಿಂದ ಜನರು ಮನಸಿಗೆ ಬಂದಂತೆ ಥಳಿಸಿದ್ದಾರೆ ಎಂದು ವರದಿಯಾಗಿದೆ.
ಹಿಂದುಳಿದ ವರ್ಗದ ಈ ಯುವಕನಿಗೆ ಊರ ಜನರು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎರಡು ಮೂರು ಜನ ಸೇರಿಕೊಂಡು ಯುವಕನಿಗೆ ಹೊಡೆಯುತ್ತಿದ್ದಾರೆ. ಆತನ ಮೈಯೆಲ್ಲ ರಕ್ತವಾಗಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಅಷ್ಟೇ ಅಲ್ಲ, ಯುವಕನ ಕುತ್ತಿಗೆಗೆ ಟವೆಲ್ ಹಾಕಿ ಎಳೆದು ಹಿಂಸೆ ಮಾಡಿದ್ದಾರೆ.
ಕೊನೆಗೆ ಯುವಕ ನೋವು ತಾಳಲಾರದೆ ಎಚ್ಚರ ತಪ್ಪಿ ಬಿದ್ದ ಮೇಲಷ್ಟೇ ಅವರು ಹೊಡೆಯುವುದನ್ನು ನಿಲ್ಲಿಸುತ್ತಾರೆ. ಈ ಘಟನೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಇದನ್ನೂ ಓದಿ: ಬೆಕ್ಕಿನ ಮರಿಗೆ ಬೆಂಕಿ ಹಚ್ಚಿ ಸಜೀವ ದಹನ ಮಾಡಿದ ಕ್ರೂರಿ; ಅವನ ಬಂಧನಕ್ಕೆ ಸಹಕರಿಸಿದವರಿಗೆ 50 ಸಾವಿರ ರೂ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಆ ಯುವಕ ಕಳ್ಳ ಮತ್ತು ಮಾದಕವಸ್ತು ವ್ಯಸನಿ. ಈತನ ವಿರುದ್ಧ ಪ್ರಕರಣವೂ ಇದೆ ಎಂದಿದ್ದಾರೆ. ಯುವಕನನ್ನು ಬಂಧಿಸಲಾಗಿದೆ ಹಾಗೇ ಅವನನ್ನು ಥಳಿಸಿದವರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಗುನಾ ಜಿಲ್ಲೆಯ ಎಸ್ಪಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)