ನ್ಯೂಸ್

ವೈದ್ಯರ ಹಿಂದಡಿ ಸಾವಿಗೆ ಮುನ್ನುಡಿ: ಚಿಕಿತ್ಸೆಗೆ ನರ್ಸ್​ಗಳೇ ಉಸ್ತುವಾರಿ

| ಪಂಕಜ ಕೆ.ಎಂ. ಬೆಂಗಳೂರು

ಕಾಯಿಲೆಗೆ ಔಷಧದ ಜತೆಗೆ ಆತ್ಮವಿಶ್ವಾಸದ ಮದ್ದನ್ನೂ ನೀಡಿ ರೋಗಿಗಳನ್ನು ಗುಣಪಡಿಸಬೇಕಾದ ವೈದ್ಯರೇ ಕರೊನಾಗೆ ಹೆದರಿ ಚಿಕಿತ್ಸೆ ನೀಡಲು ಹಿಂದಡಿ ಇಡುತ್ತಿರುವ ಪರಿಣಾಮ ಆತಂಕಕ್ಕೀಡಾಗುತ್ತಿರುವ ಸೋಂಕಿತರು ಆಸ್ಪತ್ರೆಯಲ್ಲೇ ಅಸುನೀಗುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಕೋವಿಡ್ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಬಳಿಗೆ ತೆರಳುವುದಕ್ಕೆ ಬಹುತೇಕ ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಆಸ್ಪತ್ರೆಯಲ್ಲಿ ಇದ್ದಷ್ಟು ದಿನವೂ ಶುಶ್ರೂಷಕರ ಆರೈಕೆ ಹಾಗೂ ಸಲಹೆ ಹೊರತಾಗಿ ವೈದ್ಯರನ್ನು ನೋಡಿದ್ದೇ ಇಲ್ಲ ಎನ್ನುವುದು ಚೇತರಿಸಿಕೊಂಡು ಮನೆಗೆ ಹಿಂದಿರುಗಿರುವ ಹಲವರ ಅಭಿಪ್ರಾಯ.

ಕರೊನಾ ಸೋಂಕು ಹೆಚ್ಚಿದಂತೆ ಅದರಿಂದ ಚೇತರಿಸಿಕೊಂಡವರ ಸಂಖ್ಯೆ ಕಡಿಮೆಯಾಗುತ್ತಿದೆ. ವೈದ್ಯರು ರೋಗಿಗಳ ಮನೋಬಲ ಹೆಚ್ಚಿಸದಿರುವುದೂ ಇದಕ್ಕೆ ಒಂದು ಕಾರಣ. ಈವರೆಗೆ ಬೆಂಗಳೂರಿನಲ್ಲಿ ಸೋಂಕು ತಗುಲಿರುವವರಲ್ಲಿ ಶೇ. 23.54 ಜನರಷ್ಟೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ದೇಶದ ಇತರ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಗುಣಮುಖರಾದವರ ಸಂಖ್ಯೆ ತೀರಾ ಕಡಿಮೆ. ಕರೊನಾಗೆ ನಿರ್ದಿಷ್ಟ ಔಷಧ ಇಲ್ಲ. ಹೀಗಾಗಿ ವೈದ್ಯರು, ನರ್ಸ್​ಗಳ ಆರೈಕೆಯಿಂದಲೇ ಗುಣಮುಖರಾಗಬೇಕಿದೆ. ಆದರೆ ರಾಜ್ಯದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ.

ನರ್ಸ್​ಗಳಿಗೇ ಪೂರ್ಣ ಜವಾಬ್ದಾರಿ: ಕರೊನಾ ಆಸ್ಪತ್ರೆಗಳಿಗೆ ವೈದ್ಯರು ಹೋಗುವುದೇ ಅಪರೂಪ. ಒಂದೊಮ್ಮೆ ಹೋದರೂ ರೋಗಿಯನ್ನು ಮುಟ್ಟಿ ನೋಡದೆ ನರ್ಸ್​ಗಳಿಂದಲೇ ಅವರ ಆರೋಗ್ಯದ ಸ್ಥಿತಿ ಕುರಿತು ಮಾಹಿತಿ ಪಡೆದು ದಾಖಲಾತಿ ಪುಸ್ತಕದಲ್ಲಿ ಯಾವ ಔಷಧ ನೀಡಬೇಕು ಎಂದು ಬರೆದು ಹೋಗುತ್ತಾರೆ. ಉಳಿದಂತೆ ಎಲ್ಲವನ್ನೂ ಕಾಲಕಾಲಕ್ಕೆ ನರ್ಸ್​ಗಳೇ ನೋಡಿಕೊಳ್ಳುತ್ತಾರೆ. ಹೀಗಾಗಿ ಕರೊನಾ ವಾರ್ಡ್​ಗಳು ಸಂಪೂರ್ಣವಾಗಿ ನರ್ಸ್​ಗಳು ಹಾಗೂ ಕೆಳಹಂತದ ಸಿಬ್ಬಂದಿಯ ಉಸ್ತುವಾರಿಯಲ್ಲೇ ನಡೆಯುತ್ತಿವೆ. ಇದು ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದವರೇ ಬಿಚ್ಚಿಟ್ಟಿರುವ ಕಟುಸತ್ಯ.

ವಿಶೇಷ ಚಿಕಿತ್ಸೆ ಏನಿಲ್ಲ

ಕರೊನಾ ಶಂಕಿತರನ್ನು ಪರೀಕ್ಷೆಗೆ ಒಳಪಡಿಸುವಾಗ ಹಾಗೂ ಆಸ್ಪತ್ರೆಗೆ ಕರೆದೊಯ್ಯುವಾಗ ತೋರುವ ಕಾಳಜಿ ಆಸ್ಪತ್ರೆಗೆ ದಾಖಲಾದ ನಂತರ ಇರುವುದಿಲ್ಲ. ಆಸ್ಪತ್ರೆಯಲ್ಲಿ ನಮಗೆ ಯಾವುದೇ ರೀತಿಯ ವಿಶೇಷ ಚಿಕಿತ್ಸೆ ದೊರೆಯುವುದಿಲ್ಲ. ಸಾಮಾನ್ಯ ಜ್ವರ ಹಾಗೂ ಶೀತ ಸಂಬಂಧ ಸಮಸ್ಯೆಗೆ ಕೊಡುವ ಮಾತ್ರೆಗಳನ್ನಷ್ಟೇ ಕೊಡ್ತಾರೆ. ಕರೊನಾ ಕುರಿತು ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಇಲಾಖೆ ಬಿಸಿನೀರು ಕುಡಿಯಿರಿ ಎಂದು ಪಾಠ ಮಾಡುತ್ತಿದೆ. ಆದರೆ ಆಸ್ಪತ್ರೆಯಲ್ಲಿ ಕುಡಿಯಲು ಬಿಸಿನೀರು ಕೊಡುವುದೇ ಇಲ್ಲ. ಶುದ್ಧನೀರು ಕೊಟ್ಟರೆ ಅದೇ ಪುಣ್ಯ. ಅಂದಮೇಲೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಗಂಭೀರತೆ ಎಷ್ಟಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂಬುದು ಚೇತರಿಸಿಕೊಂಡವರ ಅಭಿಪ್ರಾಯ.

ಮನೆ ಚಿಕಿತ್ಸೆಯೇ ಬೆಸ್ಟ್

ವಾಸ್ತವ ಸತ್ಯ ಏನೆಂದರೆ ಕರೊನಾ ಕುರಿತು ಸಾಮಾನ್ಯ ಜನರಿಗೆ ತಿಳಿದಿರುವಷ್ಟು ಜ್ಞಾನವೂ ಆರೋಗ್ಯ ಸಿಬ್ಬಂದಿಗೆ ತಿಳಿದಿಲ್ಲ ಎನ್ನಿಸುತ್ತದೆ. ಸೋಂಕು ಇತರರಿಗೆ ಹರಡಬಾರದು ಎಂಬ ಕಾರಣಕ್ಕಷ್ಟೇ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಲಾಗುತ್ತದೆ. ಆದರೆ ಆಸ್ಪತ್ರೆಗಳಲ್ಲಿನ ವ್ಯವಸ್ಥೆ ಹಾಗೂ ಅಲ್ಲಿ ನೀಡುವ ಚಿಕಿತ್ಸೆ ಗಮನಿಸಿದರೆ ಜನರು ಮನೆಯಲ್ಲೇ ಇದಕ್ಕಿಂತ ಹೆಚ್ಚು ನಿಗಾ ವಹಿಸಬಹುದೆನಿಸುತ್ತದೆ. ಆದರೆ ಸೋಂಕು ಇತರರಿಗೆ ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಎಚ್ಚರಿಕೆ ವಹಿಸಬೇಕು. ಮೊದಲೇ ಗಂಭೀರ ಸಮಸ್ಯೆ ಹೊಂದಿದ್ದರೆ ಅಂತಹವರ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎನ್ನುತ್ತಾರೆ ಬಿಡುಗಡೆ ಹೊಂದಿರುವ ರೋಗಿಯೊಬ್ಬರು.

ಸಾವಿಗೆ ನಿರ್ಲಕ್ಷ್ಯ ಕಾರಣವೇ?

ಗಂಭೀರ ಸಮಸ್ಯೆಯಿಂದಾಗಿ ತುರ್ತು ನಿಗಾ ಘಟಕದಲ್ಲಿ ಸಾವನ್ನಪು್ಪತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ವೈದ್ಯರು ರೋಗಿಗಳ ಸಮೀಪಕ್ಕೆ ಹೋಗದೆ ಇರುವುದು ಕಾರಣವೇ ಎಂಬ ಅನುಮಾನ ಮೂಡುತ್ತದೆ.