ನ್ಯೂಸ್

ಬೃಹತ್ ಲಸಿಕೆ ಅಭಿಯಾನದ ಮೊದಲ ದಿನ ಹಾಕಿಸಲಾದ ಡೋಸ್​ ಎಷ್ಟು ಗೊತ್ತೇ?; ಇದು ಐತಿಹಾಸಿಕ ಮೈಲಿಗಲ್ಲು!

ನವದೆಹಲಿ: ಕೋವಿಡ್​-19 ತಡೆ-ನಿಯಂತ್ರಣಕ್ಕಾಗಿ ಲಸಿಕೆ ಕಂಡು ಹಿಡಿದು ಬೃಹತ್ ಅಭಿಯಾನವನ್ನೂ ಹಮ್ಮಿಕೊಂಡಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ. ಲಸಿಕೆ ಅಭಿಯಾನದ ಮೊದಲ ದಿನವಾದ ನಿನ್ನೆ ಭಾರಿ ಸ್ಪಂದನೆ ವ್ಯಕ್ತವಾಗಿರುವುದು ಈಗಾಗಲೇ ಮೆಚ್ಚುಗೆಗೂ ಪಾತ್ರವಾಗಿದೆ. ಈ ಮಧ್ಯೆ ಅಭಿಯಾನದ ಮೊದಲ ದಿನದಂದು ಹಾಕಿಸಲಾದ ಲಸಿಕೆಯ ನಿಖರ ಲೆಕ್ಕ ಇದೀಗ ಹೊರಬಿದ್ದಿದೆ.

ಲಸಿಕೆ ಅಭಿಯಾನದ ಮೊದಲ ದಿನ ಅಂದರೆ ಜೂ. 21ರಂದು ಭಾರತದಲ್ಲಿ ಒಟ್ಟು 88.09 ಲಕ್ಷ ಡೋಸ್ ಲಸಿಕೆಗಳನ್ನು ಹಾಕಿಸಲಾಗಿದ್ದು, ಇದು ಐತಿಹಾಸಿಕ ಮೈಲಿಗಲ್ಲು ಎಂಬುದಾಗಿ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ. ಇನ್ನು ಒಟ್ಟಾರೆ ಲಸಿಕೀಕರಣದಲ್ಲಿ ದೇಶದಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

ಮಧ್ಯಪ್ರದೇಶದಲ್ಲಿ 17 ಲಕ್ಷ, ಕರ್ನಾಟಕದಲ್ಲಿ 11 ಲಕ್ಷ, ಉತ್ತರ ಪ್ರದೇಶ 7, ಬಿಹಾರ 5.75, ಗುಜರಾತ್ ಮತ್ತು ಹರಿಯಾಣದಲ್ಲಿ ತಲಾ 5.15, ರಾಜಸ್ಥಾನದಲ್ಲಿ 4.6, ತಮಿಳುನಾಡಿನಲ್ಲಿ 3.97, ಮಹಾರಾಷ್ಟ್ರದಲ್ಲಿ 3.85, ಅಸ್ಸಾಮ್​ನಲ್ಲಿ 3.68 ಲಕ್ಷದಷ್ಟು ಲಸಿಕೀಕರಣವಾಗಿದ್ದು, ಈ ರಾಜ್ಯಗಳು ಟಾಪ್-10 ಪಟ್ಟಿಯಲ್ಲಿವೆ ಎಂದು ಅವರು ತಿಳಿಸಿದ್ದಾರೆ.

ಇನ್ನು ದೇಶದಲ್ಲಿ ಜೂ. 15ರಿಂದ 21ರ ಅವಧಿಯಲ್ಲಿ 553 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 5ಕ್ಕಿಂತ ಕಡಿಮೆಯಾಗಿದೆ. ಅದಾಗ್ಯೂ ಕೋವಿಡ್​ ಮಾರ್ಗಸೂಚಿಗಳನ್ನು ಎಲ್ಲರೂ ಅಗತ್ಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಲಸಿಕೆ ಅಭಿಯಾನದಲ್ಲಿ ಗ್ರಾಮೀಣ ಪ್ರದೇಶದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿನ್ನೆ ಹಾಕಿಸಲಾದ ಲಸಿಕೆಗಳ ಪೈಕಿ ಶೇ. 63.7 ಹಳ್ಳಿಗಳಲ್ಲೇ ನಡೆದಿದ್ದು, ಪಟ್ಟಣ ಪ್ರದೇಶದಲ್ಲಿ ಶೇ. 36 ಲಸಿಕೀಕರಣವಾಗಿದೆ. ಅಲ್ಲದೆ ನಿನ್ನೆ ಲಸಿಕೆ ಪಡೆದವರಲ್ಲಿ ಶೇ. 46 ಮಂದಿ ಮಹಿಳೆಯರು ಹಾಗೂ ಶೇ. 53 ಪುರುಷರು. ಮಹಿಳೆಯರೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ತೆಗೆದುಕೊಳ್ಳುವಂತೆ ಜಾಗೃತಿ ಮೂಡಿಸಲಾಗುವುದು ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ. ಪೌಲ್ ತಿಳಿಸಿದ್ದಾರೆ.