ಬೆಂಗಳೂರು: ಪ್ರತಿದಿನವೂ ಕರೊನಾ ಕುರಿತು ವಿವರ ನೀಡುವ ಹೆಲ್ತ್ ಬುಲೆಟಿನ್‌ನಲ್ಲೇ ಮಂಗಳವಾರ ಹಲವು ತಪ್ಪುಗಳು ನುಸುಳಿ ಸಾರ್ವಜನಿಕರನ್ನು ದಿಕ್ಕು ತಪ್ಪಿಸಿದವು.
ಈಗಾಗಲೇ ಕರೊನಾದಿಂದ ಚೇತರಿಸಿಕೊಂಡಿರುವ ಮೈಸೂರು ಜಿಲ್ಲೆಯಲ್ಲಿ 64 ಸಕ್ರಿಯ ಪ್ರಕರಣಗಳಿವೆ ಎಂದು ಸಂಜೆಯ ಬುಲೆಟಿನ್‌ನಲ್ಲಿ ನಮೂದಿಸಲಾಗಿತ್ತು. ಮೈಸೂರು ಜಿಲ್ಲೆಯಲ್ಲಿ ಈವರೆಗೆ 92 ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 90 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಬ್ಬರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಬುಲೆಟಿನ್‌ನಲ್ಲಿ ‘ಒಟ್ಟು 85 ಸೋಂಕಿತರ ಪೈಕಿ 21 ಜನರು ಬಿಡುಗಡೆಯಾಗಿದ್ದು, 64 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ನಮೂದಿಸಿ ಆರೋಗ್ಯ ಇಲಾಖೆ ಎಡವಟ್ಟು ಮಾಡಿದೆ.
ರಾಮನಗರ ಜಿಲ್ಲೆಯಲ್ಲಿ ಒಟ್ಟು 30 ಸೋಂಕಿತರಿದ್ದಾರೆ ಎಂದು ತಪ್ಪಾಗಿ ನಮೂದಿಸಲಾಗಿದೆ. ಅಲ್ಲದೆ 20 ಸೋಂಕಿತರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಇನ್ನೂ 10 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಪ್ಪಾಗಿ ಮಾಹಿತಿ ನೀಡಿದೆ.
ಈ ಬಗ್ಗೆ ರಾಮನಗರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಪ್ರತಿಕ್ರಿಯಿಸಿ ‘‘ಜಿಲ್ಲೆಯಲ್ಲಿ ಕೇವಲ ಒಂದು ಪ್ರಕರಣ ಮಾತ್ರ ಈವರೆಗೆ ವರದಿಯಾಗಿದೆ. ಆರೋಗ್ಯ ಇಲಾಖೆಯ ಬುಲೆಟಿನ್‌ನಲ್ಲಿ ಕಣ್ತಪ್ಪಿನಿಂದ ಕೆಲವು ಮಾಹಿತಿ ಬದಲಾಗಿರಬಹುದು. ಜನರು ಈ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ’’ ಎಂದು ಹೇಳಿದರು.