ಪ್ಯಾರಿಸ್: ಉತ್ತರ ಫ್ರಾನ್ಸ್ನಲ್ಲಿ ಕಾರ್ಯಾಚರಿಸುತ್ತಿದ್ದ ಅಣುಶಕ್ತಿ ಚಾಲಿತ ವಿದ್ಯುತ್ ಸ್ಥಾವರ ನೀರಿಲ್ಲದ ಕಾರಣಕ್ಕಾಗಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಬೆಲ್ಜಿಯಂ ಗಡಿಯ ಆರ್ಡೆನ್ನೆಸ್ನಲ್ಲಿರುವ ಚೂಝ್ ನ್ಯೂಕ್ಲಿಯರ್ ಪವರ್ ಪ್ಲಾಂಟ್ನ ಎರಡನೇ ರಿಯಾಕ್ಟರ್ಅನ್ನು ಸೋಮವಾರ ಮಧ್ಯರಾತ್ರಿ ಬಂದ್ ಮಾಡಲಾಗಿದೆ. ಜತೆಗೆ, ಶುಕ್ರವಾರ ಸಂಜೆಯಷ್ಟೇ ಮೊದಲ ರಿಯಾಕ್ಟರ್ಅನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಕಂಪನಿ ಮಾಹಿತಿ ನೀಡಿದೆ.
ಅಣುಸ್ಥಾವರಕ್ಕೆ ನೀರು ಪೂರೈಸುವ ಮ್ಯೂಸ್ ನದಿ ಪಾತ್ರದಲ್ಲಿ ನೀರಿನ ಮಟ್ಟ ಭಾರಿ ಇಳಿಕೆಯಾಗಿದೆ. ನದಿಯ ಕವಲೊಂದರ ಮೂಲಕ ಹರಿಯುವ ನೀರನ್ನು ಅಣುಸ್ಥಾವರವನ್ನು ತಣ್ಣಗಾಗಿಸಲು ಬಳಸಲಾಗುತ್ತದೆ.
ಆರ್ಡೆನ್ನೆಸ್ ಪ್ರದೇಶದಲ್ಲಿ ಚೂಝ್ ಜನಸಮುದಾಯದ ಸ್ಮರಣೆಗಾಗಿ ಈ ಅಣುಸ್ಥಾವರಕ್ಕೆ ಚೂಝ್ ಎಂದು ಹೆಸರಿಡಲಾಗಿದೆ. ಸದ್ಯ ಈ ಪ್ರದೇಶದಲ್ಲಿ ಕ್ಷಾಮ ಆವರಿಸಿದೆ. ಹೀಗಾಗಿ ವಿದ್ಯುತ್ ಸ್ಥಾವರಗಳನ್ನು ಬಂದ್ ಮಾಡಲಾಗಿದೆ ಎಂದು ಫ್ರೆಂಚ್ ಇಂಧನ ಕಂಪನಿ ಎಡಿಎಫ್ ತಿಳಿಸಿದೆ.