ನ್ಯೂಸ್

ವಿದ್ಯಾರ್ಥಿಗಳೇ ಗಮನಿಸಿ.... ನೀಟ್​, ಜೆಇಇ (ಮೇನ್​) ಅರ್ಜಿ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ

Mysuru Rural

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ವೈದ್ಯಕೀಯ ಕೋರ್ಸ್​ ಪ್ರವೇಶಕ್ಕೆ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಹಾಗೂ ಇಂಜಿನಿಯರಿಂಗ್​ ಕೋರ್ಸ್​ಗಾಗಿ ನಡೆಸುವ ಜೆಇಇ (ಮೇನ್​) ಪರೀಕ್ಷಾರ್ಥಿಗಳಿಗೆ ಅರ್ಜಿ ತಿದ್ದುಪಡಿಗೆ ಇನ್ನೊಮ್ಮೆ ಅವಕಾಶ ನೀಡಿದೆ.

ಏಪ್ರಿಲ್​ 1ರಿಂದ 14ರವರೆಗೆ ಅರ್ಜಿಗಳಲ್ಲಿನ ಮಾಹಿತಿಯನ್ನು ತಿದ್ದುಪಡಿ ಮಾಡಬಹುದು.

ಕೋವಿಡ್​-19 ಲಾಕ್​ಡೌನ್​ನಿಂದಾಗಿ ಅಭ್ಯರ್ಥಿಗಳು ಅರ್ಜಿಗಳಲ್ಲಿ ತಿದ್ದುಪಡಿ ಮಾಡಲು ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಇನ್ನಷ್ಟು ಅವಧಿಯನ್ನು ನೀಡಲಾಗುತ್ತಿದೆ ಎಂದು ಪರೀಕ್ಷಾ ಏಜೆನ್ಸಿ ತಿಳಿಸಿದೆ. ಈ ಅವಧಿಯ ನಂತರ ಅರ್ಜಿಗಳ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ನೀಡಲಾಗುವುದಿಲ್ಲ. ಹೀಗಾಗಿ ಅತ್ಯಂತ ಎಚ್ಚರಿಕೆಯಿಂದ ಪರೀಕ್ಷಾಂಕ್ಷಿಗಳು ಅರ್ಜಿಗಳಲ್ಲಿರುವ ವಿವರವನ್ನು ತಿದದುಪಡಿ ಮಾಡಬೇಕೆಂದು ಎನ್​ಟಿಎ ಸೂಚಿಸಿದೆ. ವಿವರಗಳಿಗೆ ntaneet.nic.in, jeemain.nta.nic.in. ಸಂಪರ್ಕಿಸಬಹುದು.

ಒಟ್ಟಾರೆ ನೀಟ್​ 2020ರ ಆವೃತ್ತಿಗೆ 15,93,952 ವಿದ್ಯಾರ್ಥಿಗಳು ವೈದ್ಯ ಸೀಟು ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಅಂತೆಯೇ, ಪ್ರತಿಷ್ಠಿತ ಇಂಜಿನಿಯರಿಂಗ್​ ಕಾಲೇಜುಗಳು ಹಾಗೂ ಐಐಟಿಗಳಲ್ಲಿ ಪ್ರವೇಶ ಬಯಸಿ 9 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಸದ್ಯ ಎರಡೂ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಏಪ್ರಿಲ್​ 14ರ ನಂತರ ಲಾಕ್​ಡೌನ್​ ಪರಿಸ್ಥಿತಿಯನ್ನು ಅವಲೋಕಿಸಿ ನಿಗದಿತ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಎನ್​ಟಿಎ ತಿಳಿಸಿದೆ.

ಜೆಇಇ (ಅಡ್ವಾನ್ಸ್​) ಕೂಡ ಮುಂದೂಡಿಕೆ: ಜೆಇಇ ಮೇನ್ಸ್​ ಪರೀಕ್ಷೆ ಮುಂದೂಡಿಕೆಯಾಘಿರುವ ಕಾರಣ ಜೆಇಇ (ಅಡ್ವಾನ್ಸ್​) ಕೂಡ ಮುಂದೂಡಲಾಗಿದೆ ಎಂದು ದೆಹಲಿ ಐಐಟಿ ಪ್ರಕಟಿಸಿದೆ. ಜೆಇಇ ಮೇನ್ಸ್​ನಲ್ಲಿ ಅರ್ಹತೆ ಪಡೆಯುವ ಅಥವಾ ಫಲಿತಾಂಶವನ್ನು ಇನ್ನಷ್ಟು ಉತ್ತಮ ಪಡಿಸಿಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳಿಗಾಗಿ ಜೆಇಇ (ಅಡ್ವಾನ್ಸ್​) ನಡೆಸಲಾಗುತ್ತದೆ. ಜೆಇಇ ಮೇನ್ಸ್​ ಪರೀಕ್ಷೆ ಮುಗಿದ ಬಳಿಕ ಈ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ದೆಹಲಿ ಐಐಟಿ ತಿಳಿಸಿದೆ.