ಬಿಜೆಪಿಯಿಂದ ಜೆಡಿಎಸ್​ಗೆ ಸೇರ್ಪಡೆಗೊಂಡ ಎಂ.ಪಿ.ಕುಮಾರಸ್ವಾಮಿಗೆ ಎಚ್.ಡಿ.ಕುಮಾರಸ್ವಾಮಿ ಸ್ವಾಗತಿಸಿದ ಸಂದರ್ಭ. 
ನ್ಯೂಸ್

ಜೆಡಿಎಸ್​ನಲ್ಲಿ ಈಗ ಮೂವರು ಕುಮಾರಸ್ವಾಮಿಗಳು!

ಬೆಂಗಳೂರು: ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅದೇ ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿದ್ದ ನಟಿ ಸುಮಲತಾ ಅಂಬರೀಷ್ ಅವರನ್ನು ಸೋಲಿಸಲಿಕ್ಕೆ 'ಸುಮಲತಾ' ಎಂಬ ಹೆಸರಿನ ಏಳು ಮಂದಿಯನ್ನು ಜೆಡಿಎಸ್​ ಕಣಕ್ಕೆ ಇಳಿಸಿತ್ತು. ಹೀಗೆ ಅಂದಿನ 'ಸಪ್ತ ಸುಮಲತಾ'ರ ಜೆಡಿಎಸ್​ ಈಗ 'ಕುಮಾರತ್ರಯ'ರ ಪಕ್ಷ ಎಂದು ಹೇಳಲು ಅಡ್ಡಿ ಇಲ್ಲ.

'ಜೆಡಿಎಸ್​ಗೊಬ್ಬರೇ ಕುಮಾರಣ್ಣ' ಎಂದು ಅಭಿಮಾನಿಗಳು ಹೆಮ್ಮೆಯಿಂದ ಹೇಳಬಹುದು. ಆದಾಗ್ಯೂ ಜೆಡಿಎಸ್​ನಲ್ಲಿ ಈಗ ಮೂವರು ಕುಮಾರಸ್ವಾಮಿಗಳಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಕಲೇಶಪುರ ಕ್ಷೇತ್ರದ ಎಚ್​​.ಕೆ. ಕುಮಾರಸ್ವಾಮಿ, ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ... ಇವರೇ ಆ ಮೂವರು ಕುಮಾರಸ್ವಾಮಿಗಳು.

ಜೆಡಿಎಸ್​​ನ ಈ ಕುಮಾರತ್ರಯರ ಬಗ್ಗೆ ಮಾತನಾಡುವಾಗ 'ಕುಮಾರಸ್ವಾಮಿ' ಎಂಬುದರ ಜತೆಗೆ ಅವರ ಇನಿಷಿಯಲ್ ಇಲ್ಲವೇ ಪದನಾಮ ಬಳಸಿ ಉಲ್ಲೇಖಿಸದೇ ಹೋದರೆ ಅದು ಯಾವ ಕುಮಾರಸ್ವಾಮಿಯ ವಿಚಾರವೇ ಆಗಿದ್ದರೂ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿಯೇ ಎಂದು ಅಪಾರ್ಥಕ್ಕೆ ಈಡಾಗುವ ಸಾಧ್ಯತೆ ಇದೆ. ಏನೇ ಇರಲಿ.. ಒಂದೇ ಪಕ್ಷದಲ್ಲಿ ಹೀಗೆ ಒಂದೇ ಹೆಸರಿನ ಮೂವರು ಇರುವುದು ವಿಶೇಷ ಹಾಗೂ ಅತ್ಯಪರೂಪವೇ ಸರಿ.

ಎಂ.ಪಿ.ಕುಮಾರಸ್ವಾಮಿ, ಎಚ್​.ಡಿ.ಕುಮಾರಸ್ವಾಮಿ, ಎಚ್​.ಕೆ.ಕುಮಾರಸ್ವಾಮಿ.

ಸಿಎಂ ಇಬ್ರಾಹಿಂ ಅವರಿಗಿಂತ ಮುಂಚೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಎಚ್.ಕೆ. ಕುಮಾರಸ್ವಾಮಿ ಒಟ್ಟು 6 ಬಾರಿ ವಿಧಾನಸಭೆ ಸದಸ್ಯರಾಗಿದ್ದವರು. ಸಕಲೇಶಪುರ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಗೆಲ್ಲುತ್ತ ಬಂದಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಇಬ್ರಾಹಿಂ ಅವರನ್ನು ಪಕ್ಷದ ರಾಜ್ಯ ಅಧ್ಯಕ್ಷರನ್ನಾಗಿ ಮಾಡುವ ಸಂದರ್ಭದಲ್ಲಿ ಎಚ್.ಕೆ. ಕುಮಾರಸ್ವಾಮಿ ಅವರಿಗೆ ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಲಾಯಿತು. ಈಗಲೂ ಅದೇ ಹುದ್ದೆಯಲ್ಲಿ ಅವರು ಮುಂದುವರಿದಿದ್ದಾರೆ.

ಇನ್ನು, ಮೊನ್ನೆಮೊನ್ನೆಯವರೆಗೂ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಎಂ.ಪಿ. ಕುಮಾರಸ್ವಾಮಿ ಅವರು ತಮಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ ಅಂತ ಮುನಿಸಿಕೊಂಡು ಇಂದು ಜೆಡಿಎಸ್ ಸೇರಿದವರು. ಅವರನ್ನು ಎಚ್.ಡಿ. ಕುಮಾರಸ್ವಾಮಿ ಅವರು ಸ್ವಾಗತಿಸಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಇಂದು ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಸಂದರ್ಭದಲ್ಲಿ ಎಂ.ಪಿ. ಕುಮಾರಸ್ವಾಮಿ ಅವರೂ ವೇದಿಕೆ ಮೇಲೆ ಕುಳಿತಿದ್ದರು.