ಬೆಂಗಳೂರು: ಕೆಆರ್ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ "ಉತ್ತರಕಾಂಡ" ಚಿತ್ರಕ್ಕೆ ಕಲಾವಿದರ ಹುಡುಕಾಟ ಆರಂಭವಾಗಿದ್ದು, ಇದೀಗ ಚಿತ್ರತಂಡ ಆಡಿಷನ್ ಆಯೋಜನೆ ಮಾಡಿದೆ. ಡಾಲಿ ಧನಂಜಯ್ ಮತ್ತು ಮೋಹಕ ತಾರೆ ನಟಿ ರಮ್ಯ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾದಲ್ಲಿ ನಟಿಸಲು ಈಗ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
"ಉತ್ತರಕಾಂಡ" ಚಿತ್ರವು ಒಂದು ಕ್ರೈಂ ಡ್ರಾಮಾ ಚಿತ್ರವಾಗಿದ್ದು, ಇದನ್ನು ರೋಹಿತ್ ಪದಕಿ ನಿರ್ದೇಶಿಸಲಿದ್ದಾರೆ. ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್, ಧನಂಜಯ, ರಮ್ಯಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉತ್ತರ ಕರ್ನಾಟಕದ ಸೊಗಡನ್ನು ಹೊಂದಿರುವ ಈ ಚಿತ್ರಕ್ಕಾಗಿ ಚಿತ್ರತಂಡವು ಉತ್ತರ ಕರ್ನಾಟಕ ಭಾಗಗಳಲ್ಲಿ ಆಡಿಷನ್ ಆಯೋಜಿಸಿದೆ.
ಇದೇ ಮಾರ್ಚ್ 27 ವಿಜಯಪುರದಲ್ಲಿ ಹಾಗೂ 28 ಹುಬ್ಬಳ್ಳಿಯಲ್ಲಿ ಆಡಿಷನ್ ಆಯೋಜಿಸಿದೆ. ಆಡಿಷನ್ನಲ್ಲಿ ಭಾಗವಹಿಸಲು ವಯೋಮಿತಿ 12ರಿಂದ 75 ವರ್ಷವಾಗಿದ್ದು, ನವ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ.