ನ್ಯೂಸ್

ಕುಖ್ಯಾತ ಕಾಡುಗಳ್ಳ ವೀರಪ್ಪನ್​ ಪುತ್ರಿ ತಮಿಳುನಾಡು ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷೆ

ಚೆನ್ನೈ: ಕುಖ್ಯಾತ ಕಾಡುಗಳ್ಳ ವೀರಪ್ಪನ್​ ಪುತ್ರಿ ವಿದ್ಯಾರಾಣಿ ತಮಿಳುನಾಡು ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷೆಯಾಗಿ ನೇಮಕವಾಗಿದ್ದಾರೆ. ಈಕೆಯ ಜತೆಗೆ ತಮಿಳುನಾಡಿನ ಮಾಜಿ ಸಿಎಂ ಎಂ.ಜಿ. ರಾಮಚಂದ್ರನ್​ ಅವರ ಸಂಬಂಧಿಕರು ಕೂಡ ರಾಜ್ಯ ಬಿಜೆಪಿ ಘಟಕದ ಪದಾಧಿಕಾರಿಯಾಗಿ ನೇಮಕವಾಗಿದ್ದಾರೆ.

ಕನ್ನಡದ ವರನಟ ಡಾ. ರಾಜ್​ಕುಮಾರ್​ ಅವರನ್ನು ಅಪಹರಿಸಿದ್ದ ಕಾಡುಗಳ್ಳ ವೀರಪ್ಪನ್​, 2004ರಲ್ಲಿ ತಮಿಳುನಾಡು ರಾಜ್ಯ ಪೊಲೀಸ್​ನ ವಿಶೇಷ ಕಾರ್ಯಪಡೆಯ ಗುಂಡಿಗೆ ಬಲಿಯಾಗಿದ್ದ. ಈತನ ಪುತ್ರಿ ಈಗ ರಾಜಕೀಯವಾಗಿ ಜೀವನಕಟ್ಟಿಕೊಳ್ಳಲು ಯತ್ನಿಸುತ್ತಿದ್ದಾರೆ.

2020ರ ಫೆಬ್ರವರಿಯಲ್ಲಿ ವಿದ್ಯಾರಾಣಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅಂದಿನಿಂದಲೂ ಪಕ್ಷದ ಯುವಘಟಕದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇದೀಗ ಆಕೆಗೆ ಯುವ ಮೋರ್ಚಾದ ಉಪಾಧ್ಯಕ್ಷೆ ಹುದ್ದೆ ದೊರೆತಿದೆ.

ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್​ ಅವರ ದತ್ತುಪುತ್ರಿ ಗೀತಾ ಮತ್ತು ಮೊಮ್ಮಗ ಎಂ.ಸಿ. ಚಕ್ರಪಾಣಿ ಆರ್​ ಪ್ರವೀಣ್​ 2017ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇವರೊಂದಿಗೆ ನಟ ರಾಧಾ ರವಿgಊ ಪಕ್ಷ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗುವ ಅದೃಷ್ಟ ಒಲಿದಿದೆ.

ನಟ ವಿಜಯಕುಮಾರ್​, ನಿರ್ದೇಶಕರಾದ ಗಂಗೈ ಅಮರನ್​ ಮತ್ತು ರಾಜನಿಕಾಂತ್​ ಅವರ ಅಳಿಯ ಧನುಷ್​ ಅವರ ತಂದೆ ಕಸ್ತೂರಿ ರಾಜ ಕೂಡ ವಿಶೇಷ ಸಂಘಟಕರಾಗಿ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸಂಗೀತ ನಿರ್ದೇಶಕ ಧಿನಾ, ನಿರ್ದೇಶಕ ಪೇರಾರಸು ಬಿಜೆಪಿಯ ಕಲೆ ಮತ್ತು ಸಾಂಸ್ಕೃತಿಕ ಮೋರ್ಚಾಕ್ಕೆ ನೇಮಕವಾಗಿದ್ದಾರೆ.