ನ್ಯೂಸ್

ಕುಖ್ಯಾತ ಕಳ್ಳ ಖಾಜಪ್ಪ ವಶಕ್ಕೆ; ಮರದ ಮೇಲೆ ಕೂತಿದ್ದವನಿಗೆ 6 ಗಂಟೆ ಕಾದು ಕುಳಿತಿದ್ದ ಪೊಲೀಸರು!

ಕಲಬುರಗಿ: ಕುಖ್ಯಾತ ಕಳ್ಳ ಖಾಜಪ್ಪನನ್ನು ಅಫಜಲಪುರ ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಕಲಬುರಗಿ ಎಸ್ಪಿ ಇಶಾ ಪಂತ್ ಹೇಳಿಕೆ ನೀಡಿದ್ದಾರೆ.

ಭಾನುವಾರ ರಾತ್ರಿ ನಮ್ಮ ಪಿಎಸ್ಐಗೆ ಮಾಹಿತಿ ಬಂದಿತ್ತು. ಮಹಾರಾಷ್ಟ್ರದ ಅಕ್ಕಲಕೋಟೆ ಪೊಲೀಸರು ಖಾಜಪ್ಪ ಬಗ್ಗೆ ಮಾಹಿತಿ ನೀಡಿದ್ದರು. ಆದ್ದರಿಂದ ಅಫಜಲಪುರ ತಾಲೂಕಿನ ಸೊನ್ನ ಕ್ರಾಸ್ ಬಳಿ ಬ್ಯಾರಿಕೇಡ್ ಹಾಕಿ ನಮ್ಮ ಸಿಬ್ಬಂದಿ ಕಾಯುತ್ತಿದ್ದರು. ಇಂದು ಮುಂಜಾನೆ ನಸುಕಿನ ಜಾವ ಮೂರು ಮೂವತ್ತರ ಸಮಯದಲ್ಲಿ ಕಾರ್​​​​​ನಲ್ಲಿ ಖಾಜಪ್ಪ ಬಂದಿದ್ದ. ಪೊಲೀಸರನ್ನು ನೋಡಿ ಕಾರ್ ರಿಟರ್ನ್ ತಗೆದುಕೊಂಡು ಹೋಗುತ್ತಿದ್ದ. ಆಗ ಅಫಜಲಪುರ ಪಿಎಸ್ಐ ಕಾರ್ ಗ್ಲಾಸ್ ಒಡೆದಿದ್ದಾರೆ. ಆದರೆ ಅವರ ಸರ್ವಿಸ್ ಪಿಸ್ತೂಲ್ ಕಾರ್​​​​ನೊಳಗೆ ಬಿದ್ದಿತ್ತು. ಅದನ್ನು ತಗೆದುಕೊಂಡ ಖಾಜಪ್ಪ ಪರಾರಿಯಾಗಿದ್ದ. ನಂತರ ಆತನಿಗಾಗಿ ಹುಡುಕಾಟ ಆರಂಭಿಸಿದೆವು.

ಮುಂಜಾನೆ ಎಂಟು ಗಂಟೆ ಸಮಯದಲ್ಲಿ ಆತ ಬಳ್ಳೂರಗಿ ಹೊರವಲಯದಲ್ಲಿ ಇರುವ ಬಗ್ಗೆ ಮಾಹಿತಿ ಬಂದಿತ್ತು. ಖಾಜಪ್ಪ ಜೊತೆಗೆ ರವಿ, ಸಂಜು ಇರುವ ಬಗ್ಗೆಯೂ ಮಾಹಿತಿ ಇತ್ತು. ರವಿ ಮತ್ತು ಸಂಜು ಪೊಲೀಸರಿಗೆ ಶರಣಾಗಿದ್ದರು. ಆದರೆ ಖಾಜಪ್ಪ ಮರವೇರಿ ಕೂತಿದ್ದ.

ನಾನು ಶೂಟ್ ಔಟ್ ಮಾಡಿಕೊಂಡು ಸಾಯುತ್ತೇನೆ ಅಂತ ಬೆದರಿಕೆ ಹಾಕುತ್ತಿದ್ದ. ಖಾಜಪ್ಪನ ಮನೆಯವರನ್ನ ಕರೆಯಿಸಿ ಮನವೊಲಿಸಲು ಯತ್ನಿಸಿದರೂ ಖಾಜಪ್ಪ ಮುಂಜಾನೆ ಕೆಳಗಿಳಿದಿರಲಿಲ್ಲ. ಎಂಟು ಗಂಟೆಯಿಂದ ಆತನ ಮನವೊಲಿಸುವ ಕೆಲಸ ಮಾಡಿದ್ದು, ಕೊನೆಗೂ ಯಶಸ್ವಿಯಾಗಿದ್ದೇವೆ.

ನಾಲ್ಕು ಠಾಣೆಯ 100 ಕ್ಕೂ ಅಧಿಕ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದೆವು. ಕಲಬುರಗಿ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಖಾಜಪ್ಪ ವಿರುದ್ಧ 28 ಪ್ರಕರಣಗಳಿವೆ. ದೊಡ್ಡ ದೊಡ್ಡ ಶ್ರೀಮಂತರ ಮನೆಗಳನ್ನೇ ಕಳ್ಳತನ ಮಾಡುತ್ತಿದ್ದ. ಕಳೆದ ವರ್ಷ ಅಫಜಲಪುರ ಪೊಲೀಸರು ಆತನನ್ನು ಬಂಧಿಸಿದ್ದರು. ಆದರೆ ಜಾಮೀನಿನ ಮೇಲೆ ಹೊರಬಂದಿದ್ದರು ಎಂದು ಇಶಾ ಪಂತ್ ತಿಳಿಸಿದರು.

ಮರದ ಮೇಲೆ ಕೂತಿದ್ದ ಖಾಜಪ್ಪ ತನ್ನ ಬಳಿಯಿದ್ದ ಸರ್ವಿಸ್ ರಿವಾಲ್ವರ್ ಅನ್ನು ಎಸ್ಪಿ ಇಶಾಪಂತ್ ಕೈಗಿಟ್ಟು ಕೆಳಗಿಳಿದ್ದಾನೆ. ಸರ್ವಿಸ್ ರಿವಾಲ್ವರ್ ಪಡೆದ ನಂತರ ಖಾಜಪ್ಪನನ್ನ ಬಂಧಿಸಿ ಪೊಲೀಸರು ಕರೆದೊಯ್ದಿದ್ದಾರೆ.