ಸಿಯೋಲ್: ಉಭಯ ಕೊರಿಯಾಗಳ ಮಧ್ಯ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು ದಕ್ಷಿಣ ಕೊರಿಯಾ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುವುದಾಗಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಸೋದರಿ ಕಿಮ್ ಯೋ ಜಾಂಗ್ ಶನಿವಾರ ಎಚ್ಚರಿಕೆ ನೀಡಿದ್ದಾರೆ.
‘ದಕ್ಷಿಣ ಕೊರಿಯಾದೊಂದಿಗೆ ಸಂಬಂಧ ಕಳಚಿಕೊಳ್ಳಲು ಇದು ಸಕಾಲವೆಂದು ಭಾವಿಸಿ ದ್ದೇನೆ. ಶೀಘ್ರವೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದಿರುವ ಜಾಂಗ್, ಅದನ್ನು ಕಾರ್ಯರೂಪಕ್ಕೆ ತರಲು ಸೇನೆಯನ್ನು ನಿಯೋಜಿಸಲಾಗುವುದು ಎಂದಿದ್ದಾರೆಂದು ಕೆಸಿಎನ್ಎ ಸುದ್ದಿಸಂಸ್ಥೆ ವರದಿ ಮಾಡಿದೆ. ಯಾವ ರೀತಿಯ ಮಿಲಿಟರಿ ಕ್ರಮ ತೆಗೆದುಕೊಳ್ಳಲಾಗುವುದೆಂದು ಕಿಮ್ ಜಾನ್ ಉನ್ ಆಡಳಿತದ ಪ್ರಭಾವಶಾಲಿ ನಾಯಕಿ ಜಾಂಗ್ ಸ್ಪಷ್ಟಪಡಿಸಿಲ್ಲ. ಆದರೆ, ಉತ್ತರ ಕೊರಿಯಾದ ಗಡಿ ಭಾಗದ ಕೇಸಂಗ್ ನಗರದಲ್ಲಿರುವ ಜಂಟಿ ಸಮಾಲೋಚನಾ ಕಚೇರಿಯನ್ನು ಧ್ವಂಸಗೊಳಿಸುವುದು ಉದ್ದೇಶವಿರಬಹುದೆಂದು ಭಾವಿಸಲಾಗಿದೆ. ಗಡಿಭಾಗಗಳಲ್ಲಿ ಉತ್ತರ ಕೊರಿಯಾದ ವಿರುದ್ಧ ಕರಪತ್ರ ವಿತರಿಸುತ್ತಿದೆ ಎಂಬ ಕಾರಣಕ್ಕೆ ಕಿಮ್ ಯೋ ಜಾಂಗ್ ಆಕ್ರೋಶಗೊಂಡಿದ್ದಾರೆ. ಉತ್ತರ ಕೊರಿಯಾ ಅಧಿಕಾರಿಗಳು ಕಳೆದ ವಾರ ಹಲವು ಬಾರಿ ಕರಪತ್ರ ಹಂಚುವುದನ್ನು ಖಂಡಿಸಿದ್ದರು. -ಏಜೆನ್ಸೀಸ್