ಕೇರಳ: ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಕೆಲಸ ಪಡೆಯಬೇಕು ಎಂಬ ಆಸೆಯಿಂದ ನಕಲಿ ಅನುಭವ ಪ್ರಮಾಣಪತ್ರ(Fake Experience Certificate) ಕೊಟ್ಟ ಮಹಿಳೆಯ ವಿರುದ್ಧ ಇದೀಗ ಕೇರಳ ಪೊಲೀಸರು ಜಾಮೀನು ರಹಿತ(Non-Bailable Case) ಕೇಸ್ ದಾಖಲಿಸಿದ್ದಾರೆ.
ಘಟನೆಯ ವಿವರ: ಬುಧವಾರ ಕೇರಳದ ಎರ್ನಾಕುಲಂ(Enarkulam) ಜಿಲ್ಲೆಯ ಪೊಲೀಸರು ಕೆ.ವಿದ್ಯಾ ಎಂಬ ಮಹಿಳೆಯ ವಿರುದ್ಧ ಜಾಮೀನು ರಹಿತ ಕೇಸ್ ದಾಖಲಿಸಿದ್ದಾರೆ. ಅತ್ತಪ್ಪಾಡಿ ಸರ್ಕಾರಿ ಕಾಲೇಜಿನಲ್ಲಿ ಮಲಯಾಳಂ ಅತಿಥಿ ಶಿಕ್ಷಕಿಯಾಗಿ ಕೆಲಸ ಪಡೆಯಲು ನಕಲಿ ಅನುಭವ ಪ್ರಮಾಣಪತ್ರದ ಜತೆಗೆ ಮಹಿಳೆ ಹಾಜರಾಗಿದ್ದಳು. ಸಂದರ್ಶನದ ವೇಳೆ ವಿದ್ಯಾ ನೀಡಿದ ನಕಲಿ ಅನುಭವ ಪ್ರಮಾಣಪತ್ರವನ್ನು ನೋಡಿದ ಹಿರಿಯ ಶಿಕ್ಷಕರ ವರ್ಗ ಒಂದು ನಿಮಿಷ ಅಚ್ಚರಿಗೊಂಡಿದ್ದಾರೆ!
ಸಂದರ್ಶನ ನಡೆಸಿದ ಹಿರಿಯ ಶಿಕ್ಷಕರಿಗೆ ಸರ್ಟಿಫಿಕೇಟ್ ಮೇಲಿದ್ದ ಕಾಲೇಜಿನ ಲೋಗೊ ಮತ್ತು ಮುದ್ರೆ ಅಸಲಿಯಲ್ಲ ಎಂಬ ಅನುಮಾನ ಮೂಡಿದೆ. ಈ ಕುರಿತು ಖಚಿತ ಮಾಹಿತಿ ಕಲೆ ಹಾಕಲು ಸರ್ಕಾರಿ ಕಾಲೇಜಿನ ಆಡಳಿತ ಮಂಡಳಿ ಕೂಡಲೇ ನಕಲಿ ಪ್ರಮಾಣಪತ್ರದಲ್ಲಿ ನಮೂದಿಸಲಾಗಿದ್ದ ಮಹಾರಾಜ ಕಾಲೇಜಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದೆ.
ದೂರವಾಣಿ ಬಳಿಕ ತಮ್ಮ ಅನುಮಾನ ಧೃಢವಾಗುತ್ತಿದ್ದಂತೆ ಸರ್ಕಾರಿ ಕಾಲೇಜು ಅಧಿಕಾರಿಗಳು ಮಹಿಳೆಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ ಮತ್ತು ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ. ಮಹಿಳೆ ಸಂದರ್ಶನದಲ್ಲಿ ನೀಡಿದ್ದ ನಕಲಿ ಪ್ರಮಾಣಪತ್ರದಲ್ಲಿ ಕಾಲೇಜಿನ ವಿಭಾಗದ ಮುಖ್ಯಸ್ಥರು/ಪ್ರಾಂಶುಪಾಲರ ಸಹಿ ಇತ್ತು. ಆದ್ರೆ, ಅಸಲಿ ಪ್ರಮಾಣಪತ್ರದಲ್ಲಿ ಕಾಲೇಜಿನ ವಿಭಾಗದ ಮುಖ್ಯಸ್ಥರ ಸಹಿ ಇರುವುದಿಲ್ಲ. ಆ ರೀತಿ ಕಾಲೇಜಿನ ವತಿಯಿಂದ ಪ್ರಮಾಣಪತ್ರವನ್ನು ನೀಡುವುದಿಲ್ಲ ಎಂಬುದನ್ನು ಕಾಲೇಜಿನ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮಹಿಳೆ ಕೊಟ್ಟಂತ ಅನುಭವ ಪ್ರಮಾಣಪತ್ರವು ನಕಲಿ ಎಂಬುದು ಸಾಬೀತಾಗುತ್ತಿದ್ದಂತೆ, ಕಾಲೇಜಿನ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ. ಶೀಘ್ರವೇ ಸ್ಥಳಕ್ಕೆ ಬಂದ ಪೊಲೀಸರು, ಹೆಚ್ಚಿನ ತನಿಖೆ ನಡೆಸಿ ಮಹಿಳೆ ವಿರುದ್ಧ ಜಾಮೀನು ರಹಿತ ಕೇಸ್ ದಾಖಲಿಸಿದ್ದಾರೆ. ಕೆ.ವಿದ್ಯಾ ಮಾಜಿ SFI ನಾಯಕಿ ಮತ್ತು ಕಾಂಗ್ರೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಯ ನಾಯಕಿ ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ,(ಏಜೆನ್ಸೀಸ್).