ನ್ಯೂಸ್

ಕಾಂಗ್ರೆಸ್​ಗೆ ನಿರೀಕ್ಷಿತ ಫಲಿತಾಂಶ ಬರದಿದ್ದರೆ....! ರಾಹುಲ್​ ಗಾಂಧಿಗೆ ಪ್ರಶಾಂತ್ ಕಿಶೋರ್ ಹೀಗೆ ಹೇಳಿದ್ದೇಕೆ?

ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಸನ್ನದ್ಧವಾಗಿವೆ. ಚುನಾವಣಾ ದಿನಾಂಕಗಳು ಕೂಡ ಪ್ರಕಟಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 400 ಸೀಟುಗಳ ಗುರಿ ಹಾಕಿಕೊಂಡಿದೆ. ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಬಿಜೆಪಿಯನ್ನು ಸೋಲಿಸಲು ಹವಣಿಸುತ್ತಿದೆ. ಆದಾಗ್ಯೂ, ಅಧಿಕಾರ ಯಾರಿಗೆ ನೀಡಬೇಕೆಂಬ ಅಂತಿಮ ತೀರ್ಮಾನ ಜನರದ್ದೇ ಆಗಿದೆ. ಈ ವೇಳೆ ರಾಜಕೀಯ ತಂತ್ರಜ್ಞ ಪ್ರಶಾಂತ್​ ಕಿಶೋರ್​ ಅವರು ರಾಹುಲ್​ ಗಾಂಧಿ ಬಗ್ಗೆ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನಿರೀಕ್ಷಿತ ಫಲಿತಾಂಶ ಬರದಿದ್ದರೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಹಿಂದೆ ಸರಿಯುವ ಬಗ್ಗೆ ಯೋಚಿಸಬೇಕು ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದಾರೆ.

ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಪಿಕೆ, ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ, ರಾಹುಲ್ ಗಾಂಧಿ ಅವರು ತಮ್ಮ ಪಕ್ಷವನ್ನು ನಡೆಸುತ್ತಿದ್ದಾರೆ ಜೊತೆಗೆ 10 ವರ್ಷದಿಂದ ನೀವು ಒಂದೇ ಕೆಲಸ ಮಾಡುತ್ತಿದ್ದು, ಅದರಲ್ಲಿ ನೀವು ಯಶಸ್ವಿ ಆಗಲಿಲ್ಲ ಎಂದರೆ ಆ ಕೆಲಸವನ್ನು ಬಿಟ್ಟು ನೀವು ಹಿಂದೆ ಸರಿಯಬೇಕು. ಜೊತೆಗೆ ಐದು ವರ್ಷಗಳ ಕಾಲ ಬೇರೆಯವರಿಗೆ ಮಾಡಲು ಅವಕಾಶ ನೀಡಬೇಕು. ನಿಮ್ಮ ತಾಯಿ ಕೂಡ ಅದನ್ನೇ ಮಾಡಿದ್ದೇ ಎಂದು ಸಲಹೆ ನೀಡಿದ್ದಾರೆ.

ಏಪ್ರಿಲ್​ 19ರಂದು ಮೊದಲ ಹಂತದ ಚುನಾವಣೆ ಆರಂಭವಾಗಲಿದ್ದು, ಜೂನ್​ 1ರಂದು ಕೊನೆಯ 7ನೇ ಹಂತದ ಮತದಾನ ನಡೆಯಲಿದೆ. ಜೂನ್​ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಏಪ್ರಿಲ್ 19 ರಂದು ಮೊದಲ ಹಂತದಲ್ಲಿ 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ 89 ಕ್ಷೇತ್ರಗಳಿಗೆ, ಮೂರನೇ ಹಂತದಲ್ಲಿ 94 ಕ್ಷೇತ್ರಗಳು, ನಾಲ್ಕನೇ ಹಂತದಲ್ಲಿ 96, ಐದನೇ ಹಂತದಲ್ಲಿ 49, ಆರನೇ ಹಂತದಲ್ಲಿ 57 ಮತ್ತು ಏಳನೇ ಹಂತದಲ್ಲಿ 57 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.