ನ್ಯೂಸ್

ಮೇರಿ ಬ್ರಂಕೋವ್, ಫ್ರೆಡ್ ರಾಮ್ಸ್‌ಡೆಲ್, ಶಿಮೊನ್ ಸಕಾಗುಚಿಗೆ ಮೆಡಿಸಿನ್ ಕ್ಷೇತ್ರದ ನೊಬೆಲ್​ ಪ್ರಶಸ್ತಿ ಗರಿ! Nobel Prize 2025

Nobel Prize 2025 : ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ತನ್ನದೇಯಾದ ಅಂಗಗಳ ಮೇಲೆ ದಾಳಿ ಮಾಡದಂತೆ ತಡೆಯಲು ಹೇಗೆ ಸ್ವಯಂ ನಿಯಂತ್ರಣದಲ್ಲಿರುತ್ತದೆ ಎಂಬುದನ್ನು ವಿವರಿಸುವ ನವೀನ ಸಂಶೋಧನೆಗಳಿಗಾಗಿ 2025ರ ಫಿಸಿಯಾಲಜಿ ಅಥವಾ ಮೆಡಿಸಿನ್​ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಮೇರಿ ಇ. ಬ್ರಂಕೋವ್, ಫ್ರೆಡ್ ರಾಮ್ಸ್‌ಡೆಲ್ ಮತ್ತು ಶಿಮೊನ್ ಸಕಾಗುಚಿ ಅವರಿಗೆ ಪ್ರದಾನ ಮಾಡಲಾಗಿದೆ.

ಅಂದಹಾಗೆ, ನೊಬೆಲ್​ ಪ್ರಶಸ್ತಿ ಜಗತ್ತಿನ ಅತ್ಯುನ್ನತ ಸನ್ಮಾನ ಎಂದು ಪರಿಗಣಿಸಲಾಗಿದೆ. ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಿ ವಾರ್ಷಿಕವಾಗಿ ಈ ಗೌರವವನ್ನು ನೀಡಲಾಗುತ್ತದೆ. ಈ ಬಾರಿ ಮೆಡಿಸಿನ್​ ಕ್ಷೇತ್ರದಲ್ಲಿ ಈ ಮೂವರು ಭಾಜನರಾಗಿದ್ದಾರೆ.

ಮೇರಿ ಇ. ಬ್ರಂಕೋವ್ (ಜನನ 1961) ಅವರು ಅಮೆರಿಕದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ ಮತ್ತು ಪ್ರಸ್ತುತ ಸಿಯಾಟಲ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಫಾರ್ ಸಿಸ್ಟಮ್ಸ್ ಬಯಾಲಜಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಫ್ರೆಡ್ ರಾಮ್ಸ್‌ಡೆಲ್ (ಜನನ 1960) ಅವರು 1987ರಲ್ಲಿ ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ ಮತ್ತು ಈಗ ಸ್ಯಾನ್ ಫ್ರಾನ್ಸಿಸ್ಕೋದ ಸೊನೊಮಾ ಬಯೋಥೆರಪಿಟಿಕ್ಸ್‌ನಲ್ಲಿ ವೈಜ್ಞಾನಿಕ ಸಲಹೆಗಾರರಾಗಿದ್ದಾರೆ.

ಇನ್ನು ಶಿಮೊನ್ ಸಕಾಗುಚಿ (ಜನನ 1951) ಅವರು 1976 ರಲ್ಲಿ ತಮ್ಮ ಎಂ.ಡಿ. ಮತ್ತು 1983 ರಲ್ಲಿ ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು ಮತ್ತು ಒಸಾಕಾ ವಿಶ್ವವಿದ್ಯಾಲಯದ ಇಮ್ಯುನೊಲಾಜಿ ಫ್ರಾಂಟಿಯರ್ ರಿಸರ್ಚ್ ಸೆಂಟರ್‌ನಲ್ಲಿ ವಿಶೇಷ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಪ್ರಶಸ್ತಿಯನ್ನು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ನಿಯಂತ್ರಿಸುವ "ಪೆರಿಫೆರಲ್ ಇಮ್ಯೂನ್ ಟಾಲರೆನ್ಸ್" (ಬಾಹ್ಯ ರೋಗನಿರೋಧಕ ಸಹಿಷ್ಣುತೆ)ಗೆ ಸಂಬಂಧಿಸಿದ ಮಹತ್ವದ ಸಂಶೋಧನೆಗಾಗಿ ನೀಡಲಾಗಿದೆ. ರೋಗನಿರೋಧಕ ವ್ಯವಸ್ಥೆಯನ್ನು ದೇಹದ ಸ್ವಂತ ಕಣಗಳಿಂದ ರಕ್ಷಿಸುವ ರೆಗ್ಯುಲೇಟರಿ ಟಿ ಸೆಲ್‌ಗಳನ್ನು (Tregs) ಗುರುತಿಸಿ, ಕ್ಯಾನ್ಸರ್ ಮತ್ತು ಆಟೋಇಮ್ಯೂನ್ ರೋಗಗಳಿಗೆ ಹೊಸ ಚಿಕಿತ್ಸೆಗಳಿಗೆ ಮಾರ್ಗವನ್ನು ಈ ಸಂಶೋಧನೆ ಸುಗಮಗೊಳಿಸಿವೆ.

ರೋಗನಿರೋಧಕ ವ್ಯವಸ್ಥೆಯು ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳಂತಹ ದಾಳಿಗಳನ್ನು ತಡೆಯುತ್ತದೆ. ಆದರೆ, ಅದೇ ಸಮಯದಲ್ಲಿ ಅದು ದೇಹದ ಸ್ವಂತ ಕಣಗಳನ್ನು ದಾಳಿ ಮಾಡದಂತೆ ನಿಯಂತ್ರಣದಲ್ಲಿರಬೇಕು. ಇಲ್ಲದೇ ಹೋದರೆ ಆಟೋಇಮ್ಯೂನ್ ರೋಗಗಳು ಉಂಟಾಗುತ್ತವೆ. ಥೈಮಸ್ ಗ್ರಂಥಿಯಲ್ಲಿ (ಸೆಂಟ್ರಲ್ ಟಾಲರೆನ್ಸ್) ಕೆಲವು ಟಿ ಸೆಲ್‌ಗಳನ್ನು ನಾಶಪಡಿಸಲಾಗುತ್ತದೆ ಆದರೆ, ಕೆಲವು ತಪ್ಪಿಸಿಕೊಂಡು ಹೊರಬರುತ್ತವೆ. ಅವುಗಳನ್ನು "ರೆಗ್ಯುಲೇಟರಿ ಟಿ ಸೆಲ್‌ಗಳು" (Tregs) ಎಂದು ಕರೆಯಲಾಗುತ್ತದೆ. ಇವುಗಳು ರೋಗನಿರೋಧಕ ವ್ಯವಸ್ಥೆಯ "ಸುರಕ್ಷತಾ ಗಾರ್ಡ್‌ಗಳು" ಎಂದು ಕರೆಯಬಹುದು. ಇವುಗಳು ದೇಹದ ತಂತಿಗಳನ್ನು ರಕ್ಷಿಸುತ್ತವೆ. (ಏಜೆನ್ಸೀಸ್​)