ಉದ್ಯಮಗಳಲ್ಲಿ ಕೆಲಸದ ಅವಧಿಗಳ ಬಗ್ಗೆ ವಿಭಿನ್ನ ರೀತಿಯ ಹೇಳಿಕೆಗಳು ಗೊಂದಲವನ್ನು ಹೆಚ್ಚಿಸುತ್ತಿವೆ ಮತ್ತು ದುಡಿಯುವ ವರ್ಗದವರ ಆತ್ಮಸ್ಥೈರ್ಯವನ್ನು ಕದಲುತ್ತಿವೆ. ‘ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು’ ಎಂಬ ಇನ್ಪೋಸಿಸ್ ನಾರಾಯಣ ಮೂರ್ತಿಯವರ ಹೇಳಿಕೆಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದವು. ಈ ಬೆಳವಣಿಗೆಯ ಬೆನ್ನಲ್ಲೇ ಎಲ್ ಆಂಡ್ ಟಿ ಕಂಪನಿ ಸಿಇಒ ಎಸ್.ಎನ್.ಸುಬ್ರಹ್ಮಣ್ಯನ್, ‘ಉದ್ಯೋಗಿಗಳು ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕು’ ಎಂದು ಹೇಳುವ ಮೂಲಕ ವಿವಾದದ ಅಗ್ನಿಗೆ ತುಪ್ಪ ಸುರಿದರು. ಅಷ್ಟೇ ಅಲ್ಲ, ‘ಸಾಧ್ಯವಾದರೆ ಭಾನುವಾರ ಕೂಡ ಸಿಬ್ಬಂದಿಯಿಂದ ಕೆಲಸ ಮಾಡಿಸಲಾಗುವುದು’ ಎಂದರು. ಇವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಯಿತು. ಬಾಲಿವುಡ್ ನಟಿ ದೀಪೀಕಾ ಪಡುಕೋಣೆ ಪ್ರತಿಕ್ರಿಯಿಸಿ, ‘ಜವಾಬ್ದಾರಿ ಸ್ಥಾನದಲ್ಲಿ ಇರುವವರು ಇಂಥ ಹೇಳಿಕೆಗಳನ್ನು ನೀಡಬಾರದು’ ಎಂದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಸುಬ್ರಹ್ಮಣ್ಯನ್ ಹೇಳಿಕೆಗೆ ಅಸಮ್ಮತಿ ಸೂಚಿಸಿದ್ದು, ಕಾರ್ವಿುಕರು ದಿನಕ್ಕೆ 8 ಗಂಟೆಗಿಂತ ಹೆಚ್ಚು ಕೆಲಸ ಮಾಡಬಾರದು ಎಂದಿದ್ದಾರೆ. ‘ಒಬ್ಬ ಕಾರ್ವಿುಕ 8 ಗಂಟೆಗಳ ಕೆಲಸ ಮಾಡಿ ಆಯಾಸಗೊಳ್ಳುತ್ತಾನೆ. ಅದಕ್ಕಾಗಿಯೇ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಜವಾಹರಲಾಲ್ ನೆಹರು ಅವರು ಕಾರ್ಖಾನೆ ಕಾಯ್ದೆ ಜಾರಿಗೆ ತರುವಾಗ ಕಾರ್ವಿುಕರಿಂದ ಎಂಟು ಗಂಟೆಗಳಿಗಿಂತ ಹೆಚ್ಚು ಅವಧಿ ಕೆಲಸ ಮಾಡಬಾರದು ಎಂದಿದ್ದರು’ ಎಂದು ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಮಹೀಂದ್ರಾ ಆಂಡ್ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ, ‘ಉದ್ಯೋಗಿ ಎಷ್ಟು ಗಂಟೆ ಕಾರ್ಯನಿರ್ವಹಿಸುತ್ತಾನೆ ಎಂಬುದಕ್ಕಿಂತ ಕೆಲಸದ ಗುಣಮಟ್ಟ ಮುಖ್ಯ’ ಎಂದಿದ್ದಾರೆ. ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನ ನಡುವೆ ಅಸಮತೋಲನ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಜವಾಬ್ದಾರಿ ಸ್ಥಾನದಲ್ಲಿ ಇರುವವರು ವಿವೇಚನೆಯಿಂದ ಹೇಳಿಕೆ ನೀಡಬೇಕು. ಮತ್ತು ಕೆಲಸದ ಅವಧಿಯ ಬಗ್ಗೆ ಮಾತನಾಡುವಾಗ ಉದ್ಯೋಗಿಗಳ ಆರೋಗ್ಯ, ವೈಯಕ್ತಿಕ ಬದುಕಿನ ಬಗ್ಗೆಯೂ ಯೋಚಿಸಬೇಕು.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಕಾರ್ವಿುಕ ಸಂಘಟನೆಯ ಪ್ರಕಾರ ಹೆಚ್ಚಿನ ಅವಧಿಯ ಕೆಲಸದಿಂದ ಅತಿ ಹೆಚ್ಚು ಸಾವು ಸಂಭವಿಸುತ್ತಿರುವ ದೇಶಗಳ ಪೈಕಿ ಭಾರತವೂ ಒಂದು. 2020ರ ನೂತನ ಔದ್ಯೋಗಿಕ ಭದ್ರತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಸಂಹಿತೆ ಪ್ರಕಾರ, ಕೆಲಸದ ಅವಧಿಯು ದಿನಕ್ಕೆ 8 ಗಂಟೆ, ವಾರಕ್ಕೆ 48 ಗಂಟೆ ನಿಗದಿ ಪಡಿಸಲಾಗಿದೆ. ಕೆಲವು ಕಂಪನಿಗಳು ಅಧಿಕ ಅವಧಿಗೆ ದುಡಿಸಿಕೊಂಡಲ್ಲಿ ಹೆಚ್ಚಿನ ವೇತನವನ್ನು ಪಾವತಿಸುತ್ತವೆ. ಆದರೆ, ಇಂದಿನ ದಿನಗಳಲ್ಲಿ ಉದ್ಯೋಗಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆಯೂ ಉದ್ಯೋಗದಾತರು ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಉತ್ಪಾದಕತೆ ಹೆಚ್ಚಿಸಲು ಸಾಧ್ಯವಿಲ್ಲ. ಅದೇನಿದ್ದರೂ, ಕೆಲಸದ ಅವಧಿಯ ಬಗ್ಗೆ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಮನಸೋಇಚ್ಛೆ ಹೇಳಿಕೆ ನೀಡದಿರಲಿ.