ನ್ಯೂಸ್

ವಿಪಕ್ಷಗಳು ಕೊನೆಯ ಬಾಲ್​ನಲ್ಲಿ ಸಿಕ್ಸರ್​ ಬಾರಿಸಲು ಬಯಸುತ್ತಿವೆ: ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಇಂದು ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿರುವ ಇಂಡಿಯಾ ಎಂದು ಹೊಸದಾಗಿ ನಾಮಕರಣ ಮಾಡಿಕೊಂಡಿರುವ ವಿಪಕ್ಷಗಳ ಒಕ್ಕೂಟದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಇಂದು ನಡೆದ ಬಿಜೆಪಿ ಸಂಸದ್ದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದು, 2024ರ ಲೋಕಸಭಾ ಚುನಾವಣೆಗೂ ಮುನ್ನ ಇಂಡಿಯಾ ವಿಪಕ್ಷ ಒಕ್ಕೂಟವೂ ಸೆಮಿಫೈನಲ್​ ಆಡಲು ಬಯಸಿವೆ. ಆದರೆ, ಅದರ ಫಲಿತಾಂಶಗಳು ನೋಡಲು ಹೊರಗಿವೆ ಮತ್ತು ಕೊನೆಯ ಬಾಲ್​ನಲ್ಲಿ ಸಿಕ್ಸರ್​ ಬಾರಿಸಲು ಬಯಸುತ್ತಿವೆ ಎಂದು ಪ್ರಧಾನಿ ಟೀಕಿಸಿದರು ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.

ಇದು ವಿಪಕ್ಷಗಳ ಸ್ವಂತ ಆಂತರಿಕ ನಂಬಿಕೆಯ ಪರೀಕ್ಷೆಯಾಗಿದೆ. ಅವಿಶ್ವಾಸ ಮತವನ್ನು ನಡೆಸುವುದರಿಂದ ಯಾರು ಒಗ್ಗಟ್ಟಾಗಿದ್ದಾರೆ ಮತ್ತು ಯಾರು ಒಗ್ಗಟ್ಟಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. 2018ರಲ್ಲಿಯೇ ನಾವು ಅವರಿಗೆ ಅವಿಶ್ವಾಸ ನೀಡಿದ್ದೇವೆ ಎಂದು ಪ್ರಧಾನಿ ಟೀಕಿಸಿದರು.

ಮೈತ್ರಿ ಕೂಟಕ್ಕೆ ತಮ್ಮ ಹೊಸ ಹೆಸರು "ಘಮಾಂಡಿಯಾ" ಎಂದು ಪುನರುಚ್ಚರಿಸಿದ ಪ್ರಧಾನಿ ಮೋದಿ, ಕೆಲವರು ತುಂಬಾ ಸೊಕ್ಕಿನವರು ಮತ್ತು ತುಷ್ಟೀಕರಣದ ರಾಜಕೀಯ ಮಾಡುತ್ತಿದ್ದಾರೆ ಎಂದು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ಜುಲೈ 26ರ ಬುಧವಾರ ಬೆಳಗ್ಗೆ 9.20ಕ್ಕೆ ಸ್ಪೀಕರ್ ಕಚೇರಿಯಲ್ಲಿ ವಿಪಕ್ಷಗಳು ಅವಿಶ್ವಾಸ ನಿರ್ಣಯದ ಪ್ರಸ್ತಾವನೆವನ್ನು ಸಲ್ಲಿಸಿತ್ತು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅವಿಶ್ವಾಸ ನಿರ್ಣಯವನ್ನು ಒಪ್ಪಿಕೊಂಡು, ಎಲ್ಲ ಪಕ್ಷಗಳೊಂದಿಗೆ ಚರ್ಚಿಸಿ ನಿಯಮ ಪುಸ್ತಕದ ಪ್ರಕಾರ ಚರ್ಚೆಯನ್ನು ನಿಗದಿಪಡಿಸುವುದಾಗಿ ಹೇಳಿದ್ದರು. ನಂತರ ಆಗಸ್ಟ್​ 8ಕ್ಕೆ ಅವಿಶ್ವಾಸ ನಿರ್ಣಯ ಮಂಡನೆ ನಿಗದಿಯಾಯಿತು.

ಇಂಡಿಯಾ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದೇಕೆ?: ಮಣಿಪುರದಲ್ಲಿನ ಹಿಂಸಾತ್ಮಕ ಪರಿಸ್ಥಿತಿಯ ಕುರಿತಂತೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕೆಂದು ಮುಂಗಾರು ಅಧಿವೇಶನದ ಆರಂಭದಿಂದಲೂ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಹಲವು ದಿನಗಳ ಪ್ರತಿಭಟನೆಗಳು ಮತ್ತು ಸಭಾತ್ಯಾಗಗಳ ನಂತರ ಪ್ರತಿಪಕ್ಷಗಳು ಜುಲೈ 26ರಂದು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಎರಡು ಪ್ರತ್ಯೇಕ ನೋಟಿಸ್​ಗಳನ್ನು ನೀಡಿದವು. (ಏಜೆನ್ಸೀಸ್​)