ನ್ಯೂಸ್

ಶಿಕ್ಷಕರ ವರ್ಗ ಈ ವರ್ಷ ಇಲ್ಲ: 25 ಸಾವಿರ ಬೋಧಕರಿಗೆ ನಿರಾಸೆ; ಹೊಸ ನೇಮಕ ಹಿನ್ನೆಲೆ ಸ್ಥಗಿತ

| ಎನ್.ಎಲ್. ಶಿವಮಾದು ಬೆಂಗಳೂರು 
ವರ್ಗಾವಣೆ ನಿರೀಕ್ಷೆಯಲ್ಲಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 25 ಸಾವಿರಕ್ಕೂ ಹೆಚ್ಚಿನ ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ನಿರಾಸೆ ಉಂಟುಮಾಡಿದೆ. 2023-24ನೇ ಸಾಲಿನಲ್ಲಿ ನಡೆಸಬೇಕಿದ್ದ ಕಡ್ಡಾಯ ವರ್ಗಾವಣೆಯನ್ನು ನಡೆಸದಿರಲು ಸರ್ಕಾರ ನಿರ್ಧರಿಸಿದೆ. ಹತ್ತಾರು ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿ ನಗರಗಳತ್ತ ವರ್ಗಗೊಳ್ಳಬೇಕೆಂಬ ಕನಸು ಕಾಣುತ್ತಿದ್ದವರಿಗೆ ತಣ್ಣೀರೆರಚಿದೆ.

ನಿಯಮಗಳ ಪ್ರಕಾರ ಸರ್ಕಾರವು ಪ್ರತಿವರ್ಷ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಬೇಕು. ಆದರೆ, ಇತ್ತೀಚಿನ ವರ್ಷಗಳಲ್ಲಿ ನಾನಾ ಅಡೆತಡೆಗಳಿಂದ 2 ವರ್ಷಕ್ಕೊಮ್ಮೆ ವರ್ಗಾವಣೆ ನಡೆಸುತ್ತಿದೆ. ಈ ವರ್ಷ ಅಂತಹ ಯಾವುದೇ ಅಡೆತಡೆಗಳು ಇರಲಿಲ್ಲ. ಆದರೆ, 2022-23ನೇ ಸಾಲಿನ ವರ್ಗಾವಣೆ 4 ತಿಂಗಳ ಹಿಂದಷ್ಟೇ ಪೂರ್ಣಗೊಂಡಿದೆ. ಅದರ ಜತೆಗೆ 6ರಿಂದ 8ನೇ ತರಗತಿ ಬೋಧನೆಗಾಗಿ 13,351 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಅದು ಮುಗಿಯುವ ತನಕ ಹೊಸ ವರ್ಗಾವಣೆ ಮಾಡದಿರಲು ನಿರ್ಧರಿಸಲಾಗಿದೆ. ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೊನೆಯ ಘಟ್ಟ ತಲುಪಿದೆ. ಕೌನ್ಸೆಲಿಂಗ್ ಮೂಲಕ ಸ್ಥಳ ನಿಯೋಜನೆ ಮಾಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲ ಶಿಕ್ಷಕರು ಲಭ್ಯವಾಗಲಿದ್ದಾರೆ. ಪೂರ್ಣಪ್ರಮಾಣದಲ್ಲಿ ಲಭ್ಯವಾಗುವ ವೇಳೆಗೆ ಪರೀಕ್ಷಾ ಸಮಯ ಎದುರಾಗಲಿದೆ. ಆ ಸಂದರ್ಭದಲ್ಲಿ ವರ್ಗಾವಣೆ ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿಯೇ ವರ್ಗಾವಣೆ ಪ್ರಕ್ರಿಯೆ ಕುರಿತು ಸರ್ಕಾರ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂದು ಗೊತ್ತಾಗಿದೆ.

ಸದ್ಯದ ಮಟ್ಟಿಗೆ ಶಿಕ್ಷಕರ ವರ್ಗಾವಣೆ ನಡೆಸುವ ಕುರಿತು ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ. ಈ ಶೈಕ್ಷಣಿಕ ವರ್ಷ ಪೂರ್ಣಗೊಳ್ಳುವ ತನಕ ವರ್ಗಾವಣೆ ನಡೆಸುವುದಿಲ್ಲ. | ಬಿ.ಬಿ. ಕಾವೇರಿ, ಶಾಲಾ ಶಿಕ್ಷಣ ಆಯುಕ್ತೆ

ಕೂಡಲೇ ಅಧಿಸೂಚನೆಗೆ ಆಗ್ರಹ: ಪ್ರಸಕ್ತ ಸಾಲಿನ ವರ್ಗಾವಣೆ ಪ್ರಕ್ರಿಯೆ ಕೈತಪ್ಪಬಾರದೆಂದರೆ ಶಿಕ್ಷಣ ಇಲಾಖೆಯು ಕೂಡಲೇ ಅಧಿಸೂಚನೆ ಹೊರಡಿಸಿ ಪ್ರಕ್ರಿಯೆ ಆರಂಭಿಸಬೇಕು. ಮುಂದಿನ ಜನವರಿಯಿಂದ ಶಿಕ್ಷಕರು ಪರೀಕ್ಷೆ ಕೆಲಸದಲ್ಲಿ ತೊಡಗಿ ಕೊಳ್ಳುತ್ತಾರೆ. ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪೂರ್ವ ಸಿದ್ಧತೆ ಪರೀಕ್ಷೆ, ವಾರ್ಷಿಕ ಪರೀಕ್ಷೆ, 5, 8 ಮತ್ತು 9ನೇ ತರಗತಿಗೆ ಮೌಲ್ಯಾಂಕನ ಸೇರಿ ಹಲವು ಕೆಲಸಗಳಲ್ಲಿ ಶಿಕ್ಷಕರು ತೊಡಗಿಕೊಳ್ಳಬೇಕಿದೆ. ಒಂದು ವೇಳೆ ಈಗ ಅಧಿಸೂಚನೆ ಹೊರಡಿಸದಿದ್ದರೆ ವರ್ಗಾವಣೆಗೆ ಕಷ್ಟವಾಗಲಿದೆ. ಆದ್ದರಿಂದ ಇದೇ ನವೆಂಬರ್, ಡಿಸೆಂಬರ್​ನಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಸಬೇಕು ಎಂಬುದು ಶಿಕ್ಷಕರ ಆಗ್ರಹವಾಗಿದೆ.

ಕಡ್ಡಾಯ ವರ್ಗಾವಣೆ ಸರದಿ: ರಾಜ್ಯದಲ್ಲಿ 1.43 ಲಕ್ಷ ಪ್ರಾಥಮಿಕ ಮತ್ತು 28 ಸಾವಿರ ಪ್ರೌಢಶಾಲೆ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಶೇ.15 ಶಿಕ್ಷಕರು ಹಾಗೂ ಅನಾರೋಗ್ಯ ಕಾರಣದಿಂದ ಬಳಲುತ್ತಿರುವ ಶಿಕ್ಷಕರನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ ವರ್ಗಾವಣೆಗೆ ಅವಕಾಶ ಕಲ್ಪಿಸುತ್ತದೆ. ಒಟ್ಟು 25 ಸಾವಿರ ಶಿಕ್ಷಕರು ವರ್ಗಾವಣೆಗೆ ಅರ್ಹರಾಗಲಿದ್ದಾರೆ. ಈಗ ಈ ಎಲ್ಲ ಶಿಕ್ಷಕರಿಗೆ ಅವಕಾಶ ಕೈತಪ್ಪಲಿದೆ. ಇಲಾಖೆಯು ಒಂದು ವರ್ಷ ಕಡ್ಡಾಯ ವರ್ಗಾವಣೆ, ಮತ್ತೊಂದು ವರ್ಷ ಹೆಚ್ಚುವರಿ ವರ್ಗಾವಣೆ ನಡೆಸುತ್ತದೆ.

ಮುಂದಿನ ವರ್ಷವೂ ಡೌಟ್: ಸಾಮಾನ್ಯವಾಗಿ ವರ್ಗಾವಣೆಯನ್ನು ಶಾಲೆಗೆ ರಜೆ ಇರುವ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕೌನ್ಸೆಲಿಂಗ್ ನಡೆಸಿ ಜೂನ್​ನಲ್ಲಿ ಶಾಲೆಗಳಿಗೆ ಶಿಕ್ಷಕರು ವರದಿ ಮಾಡಿಕೊಳ್ಳಬೇಕು. ಆದರೆ, ಮುಂದಿನ ಏಪ್ರಿಲ್-ಮೇನಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ನೀತಿಸಂಹಿತೆ ಜಾರಿಯಲ್ಲಿರುವಾಗ ವರ್ಗಾವಣೆ ನಡೆಯದು. ಇದಾದ ಬಳಿಕ ಬಿಬಿಎಂಪಿ ಚುನಾವಣೆ ನಡೆದರೆ ಮತ್ತೆ ನೀತಿಸಂಹಿತೆ ಅಡ್ಡಿಯಾಗಲಿದೆ. ಒಂದು ವೇಳೆ ಚುನಾವಣೆ ಮುಗಿದ ಬಳಿಕ ಪ್ರಕ್ರಿಯೆ ಕೈಗೊಂಡರೆ, ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಪಾಠ ಪ್ರವಚನಗಳಿಗೆ ಅಡ್ಡಿಯಾಗಲಿದೆ. ಈ ಎಲ್ಲ ಕಾರಣಗಳಿಂದ ಪ್ರಕ್ರಿಯೆ ಕೈಗೊಳ್ಳದಿದ್ದರೆ ಕನಿಷ್ಠ ಒಂದು ವರ್ಷದ ಅವಧಿಗೆ ವರ್ಗಾವಣೆ ನಡೆಯುವುದು ಅನುಮಾನವಾಗಲಿದೆ.