ನ್ಯೂಸ್

ರಾಷ್ಟ್ರೀಯ ಹೆದ್ದಾರಿಯಲ್ಲಿ 60 ಕಿಲೋಮೀಟರ್​ಗೊಂದೇ ಟೋಲ್​; ಹೆಚ್ಚಿದ್ದರೆ ಸದ್ಯದಲ್ಲೇ ಬಂದ್​: ಸಚಿವ ಗಡ್ಕರಿ

ನವದೆಹಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಸಾಮಾನ್ಯವಾಗಿ ಬೇಸರ ಹುಟ್ಟಿಸುವುದೆಂದರೆ ಮತ್ತೆ ಮತ್ತೆ ಸಿಗುವ ಟೋಲ್​ಗಳು. ಆದರೆ ಇನ್ಮುಂದೆ ಈ ಟೋಲ್​ಗಳ ಹಾವಳಿ ಗಣನೀಯವಾಗಿ ತಗ್ಗಲಿದೆ.

ಅಂಥದ್ದೊಂದು ಭರವಸೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ 60 ಕಿ.ಮೀ. ಒಳಗೆ ಟೋಲ್ ಇರುವುದಿಲ್ಲ. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಅಂದರೆ ಪ್ರತಿ 60 ಕಿ.ಮೀ. ಒಂದು ಟೋಲ್ ಮಾತ್ರ ಇರಲಿದೆ. ಒಂದುವೇಳೆ ಒಂದಕ್ಕಿಂತ ಹೆಚ್ಚು ಟೋಲ್ ಇದ್ದರೆ ಅದನ್ನು ಇನ್ನು ಮೂರು ತಿಂಗಳೊಳಗೆ ಮುಚ್ಚಲಾಗುವುದು ಎಂಬುದನ್ನು ಅವರು ಲೋಕಸಭೆಯಲ್ಲಿ ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದರು.