ನ್ಯೂಸ್

ನಿಯಮ ಉಲ್ಲಂಘನೆಯೇ ಸ್ಫೂರ್ತಿ: 12.51 ಕೋಟಿ ರೂ. ಗುತ್ತಿಗೆಗಿಲ್ಲ ಟೆಂಡರ್, ಯೋಜನೆ ಅನುಷ್ಠಾನದಲ್ಲಿ ಅಕ್ರಮ ಆರೋಪ

| ಹರೀಶ್ ಬೇಲೂರು ಬೆಂಗಳೂರು

ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ 40 ಪರ್ಸೆಂಟ್ ಕಮಿಷನ್ ಸದ್ದು ಮಾಡುತ್ತಿರುವ ನಡುವೆಯೇ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆ ಉಲ್ಲಂಘಿಸಿ ರಾಜ್ಯ ಸರ್ಕಾರವೇ 12.51 ಕೋಟಿ ರೂ. ಮೊತ್ತದ ಟೆಂಡರ್ ಅಂತಿಮಗೊಳಿಸಿರುವುದು ಬೆಳಕಿಗೆ ಬಂದಿದೆ.

ಹೆಣ್ಣು ಮಕ್ಕಳಲ್ಲಿ ಪೌಷ್ಟಿ ಕಾಂಶ ಕೊರತೆ ನೀಗಿಸುವ, ಶಾಲೆ ತೊರೆಯದಂತೆ ಮನವೊಲಿಸುವ ಹಾಗೂ ಬಾಲ್ಯ ವಿವಾಹದ ವಿರುದ್ಧ ಅರಿವು ಮೂಡಿಸುವ ಸಲುವಾಗಿ ಜಾರಿ ಗೊಳಿಸಲಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ಪೂರ್ತಿ ಯೋಜನೆಯಲ್ಲಿ ಈ ಅಕ್ರಮ ನಡೆದಿದೆ.

ಒಟ್ಟು 12,51,92,996 ರೂ. ಮೊತ್ತದ ಯೋಜನೆ ಜಾರಿಗೆ ಯಾವುದೇ ಟೆಂಡರ್ ನಡೆಸದೆ 4(ಜಿ) ವಿನಾಯ್ತಿ ದುರ್ಬಳಕೆ ಮಾಡಿಕೊಂಡು ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್​ಗೆ (ಕೆಎಚ್​ಪಿಟಿ) ವಹಿಸಲಾಗಿದೆ. ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಒದಗಿಸುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದೃಢಪಡಿಸಿಕೊಳ್ಳಬೇಕು ಎಂದು ಆರ್ಥಿಕ ಇಲಾಖೆ ಹೊರಡಿಸಿರುವ ಅಧಿಸೂಚನೆಯ ದಾಖಲೆ ವಿಜಯವಾಣಿಗೆ ಲಭ್ಯವಾಗಿದೆ. ಪ್ರಸ್ತುತ ಸಾಲಿನಲ್ಲಿ ಸ್ಪೂರ್ತಿ ಯೋಜನೆಯನ್ನು ವಿವಿಧ ಜಿಲ್ಲೆಗಳಿಗೂ ವಿಸ್ತರಿಸಿ ಅನುಷ್ಠಾನಗೊಳಿಸಲಾಗುತ್ತಿದೆ.

ಕೆಟಿಟಿಪಿ ಆಶಯಕ್ಕೆ ಧಕ್ಕೆ: ಸರ್ಕಾರದ ಕಾಮಗಾರಿಗಳ ಗುತ್ತಿಗೆ ನೀಡುವ ಪ್ರಕ್ರಿಯೆ ಪೈಪೋಟಿಯಿಂದ ಕೂಡಿರಬೇಕು ಮತ್ತು ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಬೇಕೆಂಬ ನಿಟ್ಟಿನಲ್ಲಿ ಕೆಟಿಟಿಪಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಇದರ ಪ್ರಕಾರ ಟೆಂಡರ್ ಕರೆಯದೆ ಯಾವುದೇ ಕಾಮಗಾರಿ ನಡೆಸುವಂತಿಲ್ಲ. ಆದರೆ, ತುರ್ತು ಹಾಗೂ ವಿಪತ್ತಿನ ಸಂದರ್ಭದಲ್ಲಿ ಮಾತ್ರ ಈ ಕಾಯ್ದೆಯ 4ರ ಅಡಿ ಕೆಲ ವಿನಾಯಿತಿ ನೀಡಲಾಗಿದೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಅಥವಾ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿದಾಗ ಟೆಂಡರ್ ಕರೆಯದೇ ಕಾಮಗಾರಿ ನಡೆಸಲು ಈ ಕಾಯ್ದೆಯ ಸೆಕ್ಷನ್ 4(ಎ) ಅನ್ವಯ ಅವಕಾಶವಿದೆ. ಅಲ್ಲದೆ, ಸರ್ಕಾರವು ಕಾಲಕಾಲಕ್ಕೆ ಪ್ರಕಟಿಸುವ ಅಧಿಸೂಚನೆಗೆ ಅನುಸಾರವಾಗಿ ನಿರ್ದಿಷ್ಟ ಕಾಮಗಾರಿಗೆ ಅಥವಾ ಖರೀದಿಗೆ ಟೆಂಡರ್ ಕರೆಯುವ ಪ್ರಕ್ರಿಯೆಯಿಂದ ವಿನಾಯಿತಿ ಪಡೆಯಲು ಈ ಕಾಯ್ದೆಯ ಸೆಕ್ಷನ್ 4 (ಜಿ) ಅಡಿ ಅವಕಾಶ ಕಲ್ಪಿಸಲಾಗಿದೆ. ಈ ವಿನಾಯಿತಿಗಳನ್ನೇ ದುರ್ಬಳಕೆ ಮಾಡಿಕೊಂಡು ಟೆಂಡರ್ ಕರೆಯದೆ ಕಾಮಗಾರಿ ನಡೆಸುವ ಪ್ರಕ್ರಿಯೆಗಳು ಹೆಚ್ಚಾಗಿ ನಡೆಯುತ್ತಿವೆ. 5 ಲಕ್ಷ ರೂ. ಮೇಲ್ಪಟ್ಟ ಯಾವುದೇ ಕಾಮಗಾರಿಗೆ ಕಡ್ಡಾಯವಾಗಿ ಟೆಂಡರ್ ನಡೆಸಿ ಕಡಿಮೆ ಬಿಡ್ ಮಾಡಿ ಅರ್ಹತೆ ಪಡೆದ ಕಂಪನಿಗೆ ಕಾರ್ಯಾದೇಶ ನೀಡಬೇಕಿತ್ತು. ಆದರೆ, ಹಾಗಾಗಿಲ್ಲ.

ಏನಿದು ಯೋಜನೆ?: ಬಾಲ್ಯ ವಿವಾಹವನ್ನು ತಡೆಗಟ್ಟುವ ಉದ್ದೇಶದಿಂದ ಪ್ರಾಯೋಗಿಕವಾಗಿ ಕೊಪ್ಪಳ ಜಿಲ್ಲೆಯಲ್ಲಿ ಸ್ಪೂರ್ತಿ ಯೋಜನೆ ಅನುಷ್ಠಾನ ಯಶಸ್ವಿಯಾಗಿದೆ. ಇದನ್ನು ಹಂತ-ಹಂತವಾಗಿ ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಹೆಣ್ಣು ಮಕ್ಕಳು ಶಾಲೆ ಬಿಡುತ್ತಿರುವುದು, ಪೋಷಕಾಂಶ ಕೊರತೆ ಸೇರಿ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ, ಮೊದಲ ಹಂತದಲ್ಲಿ ಆ ಭಾಗದ 5 ಜಿಲ್ಲೆಗಳಲ್ಲಿ ಅಂದಾಜು 50 ಸಾವಿರ ಮಕ್ಕಳಿಗೆ ಅರಿವು ಮೂಡಿಸುವ ಈ ಯೋಜನೆ ಮೂರು ವರ್ಷದ ಅವಧಿಯದ್ದಾಗಿದೆ. ಜತೆಗೆ, ಪಾಲಕರಿಗೂ ಇದರ ಬಗ್ಗೆ ತಿಳಿವಳಿಕೆ ನೀಡುವ ಉದ್ದೇಶ ಹೊಂದಲಾಗಿದೆ.

ಅಧಿಕಾರಿಗಳು ಏನಂತಾರೆ?: ರಾಜ್ಯದಲ್ಲಿ ಹಿಂದೊಮ್ಮೆ ಅಜೀಂ ಪ್ರೇಮ್ೕ ಫೌಂಡೇಷನ್ ಸಹಯೋಗದಲ್ಲಿ ಕೆಎಚ್​ಪಿಟಿ ಒಂದು ವರ್ಷ ಕಾಲ ಮಕ್ಕಳಿಗೆ ಅರಿವು ಮೂಡಿಸುವ ಅಭಿಯಾನ ಹಮ್ಮಿಕೊಂಡಿತ್ತು. ಇದರಲ್ಲಿ ಕೆಎಚ್​ಪಿಟಿ ಮಹಿಳಾ ಸಬಲೀಕರಣ ಸಂಬಂಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಒಳ್ಳೆಯ ಫಲಿತಾಂಶ ಗಳಿಸಿದೆ. ಪ್ರತಿ ಮನೆಗೂ ತೆರಳಿ ಪಾಲಕರಿಗೆ ತಿಳುವಳಿಕೆ ಹಾಗೂ ಮಕ್ಕಳಿಗೆ ಸ್ವಾವಲಂಬನೆ ಬದುಕು ರೂಪಿಸಿಕೊಳ್ಳುವ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಅದೇ ಸಂಸ್ಥೆಗೆ ಟೆಂಡರ್ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.