ನವದೆಹಲಿ: ನೀಟ್ ಯುಜಿ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಯ ನಡುವೆ ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು ನಡೆದಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಆದ್ದರಿಂದ ನೀಟ್ ಪರೀಕ್ಷೆಯನ್ನು ಮತ್ತೆ ನಡೆಸುವ ಅಗತ್ಯವಿಲ್ಲ ಎಂದು ಕೇಂದ್ರವು ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ.
ಕೇಂದ್ರ ಶಿಕ್ಷಣ ಸಚಿವಾಲಯವು ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದರಿಂದ ಪರೀಕ್ಷೆ ಬರೆದಿರುವ ಲಕ್ಷಾಂತರ ಪ್ರಾಮಾಣಿಕ ಅಭ್ಯರ್ಥಿಗಳು ಗಂಭೀರ ಅಪಾಯಕ್ಕೆ ಸಿಲುಕುತ್ತಾರೆ. ಯಾವುದೇ ಅನ್ಯಾಯದ ವಿಧಾನಗಳನ್ನು ಅಳವಡಿಸಿಕೊಳ್ಳದೆ ಪರೀಕ್ಷೆಯನ್ನು ತೆಗೆದುಕೊಂಡ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ಹಿತಾಸಕ್ತಿಗಳಿಗೆ ಧಕ್ಕೆಯಾಗಬಾರದು ಎಂದು ತಿಳಿಸಿದೆ.
ಅಲ್ಲದೆ ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದ ಗೌಪ್ಯತೆ ಉಲ್ಲಂಘನೆ ಆಗಿರುವ ಬಗ್ಗೆ ಯಾವುದೇ ಪುರಾವೆಗಳು ಇಲ್ಲ. ಆದರಿಂದ ಸಂಪೂರ್ಣ ಪರೀಕ್ಷೆಯನ್ನು ಮತ್ತು ಈಗಾಗಲೇ ಘೋಷಿಸಲಾದ ಫಲಿತಾಂಶಗಳನ್ನು ರದ್ದುಗೊಳಿಸುವುದು ತರ್ಕಬದ್ಧವಲ್ಲ ಎಂದು ಅಫಿಡವಿಟ್ ಸಲ್ಲಿಸಿರುವುದಾಗಿ ಕೇಂದ್ರವು ತಿಳಿಸಿದೆ. ಅಲ್ಲದೆ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಕೇಂದ್ರೀಯ ತನಿಖಾ ದಳವನ್ನು(ಸಿಬಿಐ) ಕೇಳಿಕೊಂಡಿರುವುದಾಗಿ ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದೆ.
NEET-UG ಮರುಪರೀಕ್ಷೆಯನ್ನು ಎಲ್ಲಾ 24 ಲಕ್ಷ ಅಭ್ಯರ್ಥಿಗಳಿಗೆ ನಡೆಸುವ ಬಗ್ಗೆ ಕೇಂದ್ರ ಸರ್ಕಾರವು ತನ್ನ ನಿಲುವನ್ನು ದಾಖಲಿಸುತ್ತಿರುವುದು ಇದೇ ಮೊದಲು. ಕಳೆದ ತಿಂಗಳು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಅಭ್ಯರ್ಥಿಗಳಿಗೆ ಉಂಟಾದ ಅನಾನುಕೂಲತೆಗೆ ನೈತಿಕ ಹೊಣೆಗಾರಿಕೆ ಹೊತ್ತಿದ್ದರು. ಆದರೆ ಮರುಪರೀಕ್ಷೆ ನಡೆಸುವ ಬಗ್ಗೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸರಲಿಲ್ಲ. ಮೇ 5 ರಂದು ನೀಟ್ ಯುಜಿ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ಮಾಡಲು ಸಿದ್ಧವಾಗಿರುವ ಕಾರಣ ಕೇಂದ್ರವು ಅಫಿಡವಿಟ್ ಸಲ್ಲಿಸಿದೆ. (ಏಜೆನ್ಸೀಸ್)