ಬೆಂಗಳೂರು: ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ಗಳಲ್ಲಿ ಇನ್ನು ಮುಂದೆ ಚಾಲಕರು ಅಥವಾ ನಿರ್ವಾಹಕರು ಅನಪೇಕ್ಷಣಿಯವಾಗಿ ಮೊಬೈಲ್ ಬಳಕೆ ಮಾಡಿ ರೀಲ್ಸ್ ಮಾಡಿದರೆ ಸೇವೆಯಿಂದ ಅಮಾನತುಗೊಳಿಸುವ ಎಚ್ಚರಿಕೆಯನ್ನು ಸಾರಿಗೆ ಇಲಾಖೆ ನೀಡಿದೆ.
ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ, ಕಲ್ಯಾಣ ಸಾರಿಗೆ ಸಮುಚ್ಚಯಗಳಲ್ಲಿನ ಸಿಬ್ಬಂದಿ ಇತ್ತೀಚೆಗೆ ರೀಲ್ಸ್ ಚಟಕ್ಕೆ ಬಿದ್ದಿದ್ದು, ಕರ್ತವ್ಯದ ವೇಳೆ ರೀಲ್ಸ್ ಮಾಡುತ್ತಿದ್ದಾರೆ. ಕಳೆದ ಮೇ ತಿಂಗಳಲ್ಲಿ ಚಾಲಕ ಛತ್ರಿ ಹಿಡಿದುಕೊಂಡು ಬಸ್ ಓಡಿಸುತ್ತಿದ್ದ ವಿಡಿಯೋ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಮುಂದಿಟ್ಟುಕೊಂಡು ವಿಪಕ್ಷಗಳ ಮುಖಂಡರು ಸರ್ಕಾರದ ವಿರುದ್ಧ ಬಸ್ಗಳು ಸೋರುತ್ತಿವೆ ಎಂದು ಕೆಂಡಕಾರಿದ್ದರು.
ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಹೊರಟಿದ್ದ ವೇಳೆ ಕೆಎಸ್ಆರ್ಟಿಸಿ ಬಸ್ ಚಾಲಕ ರೀಲ್ಸ್ ಹುಚ್ಚಾಟಕ್ಕೆ ಎರಡು ಎತ್ತುಗಳು ಬಲಿಯಾಗಿದ್ದವು. ಕೆಲ ಚಾಲಕರ, ನಿರ್ವಾಹಕರ ಈ ಹುಚ್ಚಾಟಗಳಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಈ ಸಂಬಂಧ ಹಲವಾರು ದೂರುಗಳು, ಆಕ್ಷೇಪಗಳು ಸಲ್ಲಿಕೆಯಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಇಲಾಖೆ, ಇನ್ನು ಮುಂದೆ ಕರ್ತವ್ಯದ ವೇಳೆ ಅನಪೇಕ್ಷಣೀಯವಾಗಿ ಮೊಬೈಲ್ ಬಳಕೆ ಹಾಗೂ ರೀಲ್ಸ್ ಮಾಡುವುದು ಕಂಡುಬಂದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ‘ನಿನ್ನಿಂದ ದೂರವಾಗಿ ಬದುಕಲಾರೆ’ ಪತ್ರ ಬರೆದಿಟ್ಟು ನದಿಗೆ ಹಾರಿದಳು; 1 ದಿನ ಕಳೆದ್ರು ಪತ್ತೆಯಾಗಿಲ್ಲ ಮೃತದೇಹ
ಕರ್ನಾಟಕ ಸಾರಿಗೆ ಇಲಾಖೆಯ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ವೇಳೆ ರೀಲ್ಸ್ ಮಾಡಿದರೇ ಅಂತವರನ್ನು ಮುಲಾಜಿಲ್ಲದೆ ಕೆಲಸದಿಂದ ತೆಗೆಯಲಾಗುತ್ತದೆ. ರೀಲ್ಸ್ ಮಾಡಿದವರು ಕೆಲಸದಲ್ಲಿ ಇರಲು ಲಾಯಕ್ ಅಲ್ಲ. ಅಂಥ ನೌಕರರ ಬಗ್ಗೆ ಯಾವುದೇ ದಾಕ್ಷಿಣ್ಯ ತೋರದೆ ಕೆಲಸದಿಂದ ತೆಗೆದು ಹಾಕಲಾಗುವುದು.
| ರಾಮಲಿಂಗಾ ರೆಡ್ಡಿ ಸಾರಿಗೆ ಸಚಿವ